
ವಾಷಿಂಗ್ಟನ್/ಟೆಹ್ರಾನ್, ಜು.೧೩: ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಹೊರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತಾರಕಕ್ಕೇರಿದೆ.
ಇರಾನ್ ಈ ಜಲಮಾರ್ಗವನ್ನು ಮುಚ್ಚಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಅಮೆರಿಕವು ಇರಾನ್‌ನ ೧೪೦ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಮಿಲಿಟರಿ ಪಡೆಗಳು ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಅದರ ಮಿತ್ರ ರಾಷ್ಟ್ರಗಳ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.
೧೪೦ ನೆಲೆಗಳ ಮೇಲೆ ಅಮೆರಿಕ ದಾಳಿಅನುಮತಿ ಇಲ್ಲದ ಮಾರ್ಗದಲ್ಲಿ ಚಲಿಸುತ್ತಿದೆ ಎಂಬ ನೆಪವೊಡ್ಡಿ ಸೈಪ್ರಸ್ ಧ್ವಜ ಹೊತ್ತ ಎಂವಿ ಜಿಎಫ್‌ಎಸ್ ಗ್ಯಾಲಕ್ಸಿ ವಾಣಿಜ್ಯ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಕ್ರೂಸ್ ಕ್ಷಿಪಣಿ ದಾಳಿ ನಡೆಸಿತ್ತು.
ಈ ದಾಳಿಯಲ್ಲಿ ಹಡಗಿನ ಎಂಜಿನ್ ರೂಮ್ ಧ್ವಂಸಗೊಂಡಿದ್ದು, ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇರಾನ್‌ನ ಈ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ಕರಾವಳಿ ಕಣ್ಗಾವಲು ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ನೆಲೆಗಳು ಹಾಗೂ ಸಂವಹನ ಜಾಲಗಳು ಸೇರಿದಂತೆ ೧೪೦ಕ್ಕೂ ಹೆಚ್ಚು ಸೇನಾ ಗುರಿಗಳನ್ನು ಧ್ವಂಸಗೊಳಿಸಿದೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್,ಇರಾನ್ ತಪ್ಪು ನಿರ್ಧಾರ ಕೈಗೊಂಡಿದೆ.ಈಗ ಅದಕ್ಕೆ ತಕ್ಕ ಬೆಲೆ ತೆರುತ್ತಿದೆ ಎಂದು ಎಚ್ಚರಿಸಿದ್ದಾರೆ. ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಪ್ರತಿಯಾಕ್ರಮಣಅಮೆರಿಕದ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್, ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಿನ್ಸ್ ಹಸನ್ ವಾಯುನೆಲೆಯ ಕಮಾಂಡ್ ಸೆಂಟರ್ ಮತ್ತು ಡ್ರೋನ್ ಹ್ಯಾಂಗರ್‌ಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ.
ಇದರೊಂದಿಗೆ ಯುಎಇ ಕತಾರ್, ಕುವೈತ್, ಓಮನ್ ಮತ್ತು ಬಹ್ರೇನ್ ದೇಶಗಳ ಮೇಲೆಯೂ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ. ಕಳೆದ ಮೇ ತಿಂಗಳಿನಿಂದ ಯಾವುದೇ ದಾಳಿಗೆ ಒಳಗಾಗದ ಯುಎಇ ಮತ್ತು ಕತಾರ್ ದೇಶಗಳು ಇರಾನ್‌ನ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಪ್ರಕಟಿಸಿವೆ.
ಜಲಸಂಧಿ ಮುಚ್ಚಿಲ್ಲ, ಮುಕ್ತವಾಗಿದೆ: ಅಮೆರಿಕ ಸ್ಪಷ್ಟನೆಇರಾನ್ ಈ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದ್ದರೂ, ಅಮೆರಿಕದ ಸೆಂಟ್ರಲ್ ಕಮಾಂಡ್ ಇದನ್ನು ನಿರಾಕರಿಸಿದೆ. ಹೊರ್ಮುಜ್ ಜಲಸಂಧಿಯು ಅಂತರರಾಷ್ಟ್ರೀಯ ಜಲಮಾರ್ಗವಾಗಿದ್ದು, ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ.
ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಅಮೆರಿಕನ್ ಪಡೆಗಳು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಪಾಯದಲ್ಲಿ ಕದನ ವಿರಾಮ ಒಪ್ಪಂದಕಳೆದ ತಿಂಗಳಷ್ಟೇ ಜಲಸಂಧಿಯನ್ನು ಪುನಃ ತೆರೆಯಲು ಮತ್ತು ಶಾಂತಿ ಸ್ಥಾಪಿಸಲು ಅಮೆರಿಕ ಹಾಗೂ ಇರಾನ್ ನಡುವೆ ಮಧ್ಯಂತರ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಆದರೆ ಪ್ರಸ್ತುತ ದಾಳಿಗಳಿಂದಾಗಿ ಈ ಒಪ್ಪಂದ ಮುರಿದುಬಿದ್ದಿದೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ.
ಇತ್ತ ಇರಾನ್‌ನ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್, “ಏಕಪಕ್ಷೀಯ ಒಪ್ಪಂದಗಳ ಕಾಲ ಮುಗಿದಿದೆ. ನಿಮ್ಮ ಮಾತನ್ನು ಉಳಿಸಿಕೊಳ್ಳಿ ಇಲ್ಲವೇ ಬೆಲೆ ತೆರಿರಿ” ಎಂದು ಅಮೆರಿಕಾಗೆ ಎಕ್ಸ್ (ಟ್ವಿಟರ್) ಮೂಲಕ ಸವಾಲು ಹಾಕಿದ್ದಾರೆ.
ಪ್ರಸ್ತುತ ಇರಾನ್‌ನ ತಂತ್ರಜ್ಞಾನ ಪ್ರಾಮುಖ್ಯತೆಯ ಕ್ಯೂಶ್ಮ್ ದ್ವೀಪದ ಮೇಲೆಯೂ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಕೋಟಿಗೆ ತಲುಪಿದೆ.
































