Home ಜಿಲ್ಲೆ ಹುಲಿಕಲ್ ಜೆ ಗ್ರಾಮದಲ್ಲಿ ಜಾಗದ ವಿವಾದಕ್ಕೆ ಮರಣಾಂತಿಕ ಹಲ್ಲೆ ಆರೋಪಎರಡು ತಿಂಗಳಾದರೂ ಆರೋಪಿಗಳ ವಿರುದ್ಧ ಕ್ರಮವಿಲ್ಲವೆಂದು...

ಹುಲಿಕಲ್ ಜೆ ಗ್ರಾಮದಲ್ಲಿ ಜಾಗದ ವಿವಾದಕ್ಕೆ ಮರಣಾಂತಿಕ ಹಲ್ಲೆ ಆರೋಪಎರಡು ತಿಂಗಳಾದರೂ ಆರೋಪಿಗಳ ವಿರುದ್ಧ ಕ್ರಮವಿಲ್ಲವೆಂದು ಕುಟುಂಬದ ಆಕ್ರೋಶ

ಯಾದಗಿರಿ:ಮೇ.10: ಜಿಲ್ಲೆಯ ಸಮೀಪದ ಹುಲಿಕಲ್ ಜೆ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಮರಣಾಂತಿಕ ಹಲ್ಲೆ ಪ್ರಕರಣ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ದಾಖಲಾಗಿದ್ದು ಎರಡು ತಿಂಗಳು ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗಾಯಾಳು ಮೈಬೂಬ್ ತಂದೆ ಸಲಾಂ ಸಾಬ್ ಹಾಗೂ ಅವರ ಕುಟುಂಬಸ್ಥರು ಪೆÇಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಮೈಬೂಬ್ ಸಲಾಂ ಸಾಬ್, “ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಆಯ್ಕೆ ಮಾಡಿಕೊಂಡು ಉದ್ದೇಶಪೂರ್ವಕವಾಗಿ ಮನೆಗೆ ನುಗ್ಗಿದ ನಾಭಿ ಪಟೇಲ್, ಕಾಶಿಮ್ ಪಟೇಲ್, ಚಾಂದ್ ಪಟೇಲ್ ಹಾಗೂ ಉಸ್ಮಾನ್ ಪಟೇಲ್ ಸೇರಿ ನನ್ನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಾಗದ ವಿಚಾರವನ್ನು ನೆಪ ಮಾಡಿಕೊಂಡು ಪೂರ್ವಯೋಜಿತವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ,” ಎಂದು ಗಂಭೀರ ಆರೋಪಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಗೇರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0067/2026 ಅಡಿಯಲ್ಲಿ ದೂರು ದಾಖಲಾಗಿದ್ದರೂ, ಆರೋಪಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದ ಹಿನ್ನೆಲೆ ಅವರಿಗೆ ಕಾನೂನು ಭಯವೇ ಇಲ್ಲದಂತಾಗಿದೆ ಎಂದು ಕುಟುಂಬದವರು ದೂರಿದ್ದಾರೆ.

“ಹಲ್ಲೆಯಲ್ಲಿ ನನಗೆ ಗಂಭೀರ ಗಾಯಗಳಾಗಿವೆ. ವಿಶೇಷವಾಗಿ ಗುಪ್ತಾಂಗ ಭಾಗಕ್ಕೂ ಪೆಟ್ಟು ಬಿದ್ದಿದ್ದು, ದೇಹದ ಹಲವೆಡೆ ಗಾಯಗಳಾಗಿವೆ. ಚಿಕಿತ್ಸೆ ಪಡೆದುಕೊಂಡಿದ್ದರೂ ಇಂದಿಗೂ ಮಾನಸಿಕ ಹಾಗೂ ದೈಹಿಕವಾಗಿ ನೋವು ಅನುಭವಿಸುತ್ತಿದ್ದೇನೆ. ಆದರೆ ಆರೋಪಿಗಳು ಮಾತ್ರ ಯಾವುದೇ ಭಯವಿಲ್ಲದೆ ಗ್ರಾಮದಲ್ಲೇ ಓಡಾಡುತ್ತಿದ್ದು, ಪ್ರತಿದಿನ ಜೀವ ಬೆದರಿಕೆ ಹಾಕುತ್ತಿದ್ದಾರೆ,” ಎಂದು ಮೈಬೂಬ್ ಕಣ್ಣೀರಿನಿಂದ ಅಳಲು ತೋಡಿಕೊಂಡರು.

“ರಸ್ತೆಯಲ್ಲಿ ಎಲ್ಲಿಯಾದರೂ ಕಂಡರೆ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದು, ಕುಟುಂಬದವರು ಭಯಭೀತ ವಾತಾವರಣದಲ್ಲಿ ಬದುಕುವಂತಾಗಿದೆ. ಹಲವು ಬಾರಿ ಪೆÇಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದರೂ ನ್ಯಾಯ ದೊರೆಯುತ್ತಿಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಪ್ರಕರಣದಲ್ಲಿರುವ ಆರೋಪಿಗಳಿಗೆ ಕೆಲ ಅಧಿಕಾರಿಗಳ ಬೆಂಬಲ ಇರುವ ಕಾರಣವೇ ಅವರು ಯಾವುದೇ ಆತಂಕವಿಲ್ಲದೆ ಅಧಿಕಾರಿಗಳ ಎದುರೇ ಮುಕ್ತವಾಗಿ ಸಂಚರಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ಗ್ರಾಮದಲ್ಲಿ ಮತ್ತೆ ಜಗಳ-ವಾದಗಳಿಗೆ ಮುಂದಾಗುತ್ತಿರುವುದು ಪೆÇಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೆÇಲೀಸ್ ಇಲಾಖೆ ಆರೋಪಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಮೈಬೂಬ್ ಸಲಾಂ ಸಾಬ್ ಕುಟುಂಬ ಪೆÇಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.