
ಕೋಲಾರ,ಮೇ,೧೦-ಸುರಕ್ಷತಾ ನಿಯಮ ಪಾಲಿಸದ ಖಾಸಗಿ ಸ್ಪೀಪರ್ ಬಸ್ಸುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅನಧಿಕೃತ ಶಾಲಾ ಕಾಲೇಜು ವಾಹನಗಳ ತಪಾಸಣೆಗೆ ವಿಶೇಷ ತಂಡ ರಚನೆ ಮಾಡಿ ಮಕ್ಕಳ ಭವಿಷ್ಯ ಪ್ರಯಾಣಿಕರ ಜೀವ ರಕ್ಷಿಸುವ ಜೊತೆಗೆ ಬಾರೀ ಟನ್ ತುಂಬುವ ಟಿಪ್ಪರ್ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ರೈತ ಸಂಘದಿಂದ ಆರ್.ಟಿ.ಓ ವೇಣುಗೋಪಾಲರೆಡ್ಡಿರಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ಸಂಚರಿಸುವ ಖಾಸಗಿ ಸ್ವೀಪರ್ ಕೋರ್ಟ್ ಹಾಗೂ ಹವಾ ನಿಯಂತ್ರಿತ ಬಸ್ಸುಗಳ ಪ್ರಯಾಣಿಕರ ಪಾಲಿಗೆ ಆರಾಮದಾಯಕ ಪ್ರಯಾಣದ ಆಸರೆಯಾಗಬೇಕೆ ಹೊರತು, ಆಗ್ನಿ ಕುಂಡಗಳಾಗಬಾರದು ಇದುವರೆವಿಗೂ ಸಂಭವಿಸಿರುವ ಬಸ್ಸಿನ ಆಗ್ನಿ ದುರಂತದ ಹೆಚ್ಚಿನ ಪ್ರಕರಣಗಳಲ್ಲಿ ಪ್ರಯಾಣಿಕರ ಪ್ರಾಣಕ್ಕೆ ಎರವಾಗಿರುವುದು ಸ್ವೀಪರ್ ಬಸ್ಸುಗಳೇ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ರಾಜ್ಯದ ಶೇ.೯೦ರಷ್ಟು ಸ್ವೀಪರ್ ಬಸ್ಸುಗಳಲ್ಲಿ ಆಗ್ನಿ ಸುರಕ್ಷತಾ ಮಾನದಂಡ ಗೌಣವಾಗಿರುವುದು ಆತಂಕಕಾರಿಯಾಗಿದೆ, ಸಾರಿಗೆ ಇಲಾಖೆಯು ಸುರಕ್ಷತಾ ಮಾರ್ಗಸೂಚಿ ಅಳವಡಿಕೆಗೆ ಗಡವು ನೀಡಿದ್ದರೂ, ಕೆಲವು ಬಸ್ಸು ಮತ್ತು ಏಜೆಂಟ್ ಟ್ರಾವೆಲ್ಸ್ ಮಾಲೀಕರು ತೋರುತ್ತಿರುವ ನಿರ್ಲಕ್ಷತೆಯಿಂದ ಇತ್ತೀಚಿನ ವರ್ಷಗಳಲ್ಲಿ ಸಂಚಾರಿಸುವ ಖಾಸಗಿ ಬಸ್ಸುಗಳು ಪ್ರಯಾಣಿಕರಿಗೆ ಉಚಿತ ಶವಪೆಟ್ಟಿಗೆ ಕೊಡುವ ಬಸ್ಸುಗಳಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಬಸ್ಸು ಮಾಲೀಕರು ಲಾಭದ ಉದ್ದೇಶದಿಂದ ಸುರಕ್ಷತಾ ಮಾನದಂಡ ಗಾಳಿಗೆ ತೂರಿರುವುದು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆಗ್ನಿಶಾಮಕ ಉಪಕರಣಗಳು ತುರ್ತು ನಿರ್ಗಮನ ಕಿಟಕಿಗಳು ಮತ್ತು ಸುಲಭವಾಗಿ ಹೊಡೆಯಬಹುದಾದ ಗಾಜುಗಳ ಅಳವಡಿಕೆಗೆ ವ್ಯಯಸುವ ಹಣಕ್ಕಿಂತ ಪ್ರಯಾಣಿಕರ ಜೀವನದ ಮೌಲ್ಯ ದೊಡ್ಡದೆಂದು ಅರಿಯಬೇಕು ಎಂದರು.
ಈ ಹಿಂದೆ ನಡೆದ ಹಲವಾರು ಭೀಕರ ಅಗ್ನಿ ದುರಂತಗಳಲ್ಲಿ ಬೆಂಕಿಗಿಂತಲೂ ಹೆಚ್ಚಾಗಿ ಹೊಗೆ ಮತ್ತು ಉಸಿರು ಗಟ್ಟುವಿಕೆಯಿಂದಲೇ ಸಾರ್ವಜನಿಕರ ಸಾವಾಗಿದ್ದು ಕಿರಿದಾದ ಸೀಟುಗಳು, ಇಕ್ಕಟ್ಟಾದ ದಾರಿಗಳು, ಬೆಂಕಿ ಹೊತ್ತಿಕೊಂಡಾಗ ಸುಗಮವಾಗಿ ಹೊರಬರಲು ಸಾದ್ಯವಾಗದೆ, ಉಸಿರು ಗಟ್ಟಿ ಸಾವನ್ನಪ್ಪುತ್ತಿದ್ದರು. ಇಂಥಹ ಸಮಸ್ಯೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಇರುವುದು ಕರ್ತವ್ಯ ನಿರ್ಲಕ್ಷತೆಯ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ ವೇಣುಗೋಪಾಲರೆಡ್ಡಿ, ಅನಧಿಕೃತ ಖಾಸಗಿ ಬಸ್ಸುಗಳ ಮತ್ತು ಟ್ರಾವೆಲ್ಸ್ ಬಸ್ಸುಗಳ ವಿರುದ್ಧ ಕಾನೂನು ಕೈಗೊಳ್ಳುತ್ತಿದ್ದೇವೆ. ಜೊತೆಗೆ ಶಾಲಾ ವಾಹನಗಳ ಮಾಹಿತಿ ದಾಖಲೆಗಳು ನೀಡುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತೇವೆ. ಕೂಡಲೇ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಮನವಿಯ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಕಮ್ಮದಟ್ಟಿ ಚಲಪತಿ, ಜಿ,ಮುಖಂಡ ಕಾಮನೂರು ಬಾಬು, ಮಂಜುನಾಥ, ದೇವರಾಜ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ, ಪುತ್ತೇರಿರಾಜು, ಗಿರೀಶ್, ಕದರಿನತ್ತ ಅಪ್ಲೋಜಿರಾವ್, ಸುಪ್ರಿಂ ಚಲ, ಶಶಿಕುಮಾರ್, ಮುನಿರಾಜು, ಶೈಲಜ, ರತ್ನಮ್ಮ, ಗೌರಮ್ಮ, ಸುಶೀಲಮ್ಮು, ವೆಂಕಟಮ್ಮ, ನಯನ, ಪವಿತ್ರ ಇದ್ದರು.


























