
ಕಲಬುರಗಿ,ಜು.7: ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೈತರೊಬ್ಬರು ಮೃತಪಟ್ಟಿದ್ದಾರೆ ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ತಾಲೂಕಿನ ಮೇಳಕುಂದ (ಬಿ) ಗ್ರಾಮದ ಸಿದ್ದಣ್ಣ ವೀರಪ್ಪ ಮೃತ ರೈತ. ಕಳೆದ ವಾರ ಸಾಲ ಬಾಧೆಯಿಂದ ವಿಷ ಸೇವನೆ ಮಾಡಿದ್ದ ರೈತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಸಂಜೆವರೆಗೆ ಚೇತರಿಕೆ ಕಾಣುತ್ತಿದ್ದಾರೆ ಎಂದು ವೈದ್ಯರು ಮತ್ತು ಸಿಬ್ಬಂದಿ ಹೇಳಿದ್ದರು. ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಗ್ಲುಕೋಸ್ ಐ.ವಿ.ಕಳಚಿ ಬಿದ್ದಿದ್ದನ್ನು ಐಸಿಯು ಸಿಬ್ಬಂದಿ ಗಮನಿಸಿಲ್ಲ. ಇದರಿಂದ ತೀವ್ರ ರಕ್ತಸ್ರಾವವಾಗಿದೆ. ರಕ್ತ ನೆಲದ ಮೇಲೆ ಬಿದ್ದಿರುವ ಚಿತ್ರಗಳು ಎಲ್ಲೆಡೆ ವೈರಲ್ ಆಗಿವೆ. ನಾವು ಬಂದು ನೋಡದೆ ಇದ್ದರೆ ಇನ್ನು ಎಷ್ಟು ರಕ್ತ ಹೋಗುತ್ತಿತ್ತು ಎಂದು ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ ಜಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಿದ್ದಣ್ಣ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ನಂತರ ಎರಡು ದಿನ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಿದ ನಂತರ ಮೂರ್ನಾಲ್ಕು ದಿನಗಳ ಹಿಂದೆ ಐಸಿಯುಗೆ ದಾಖಲಿಸಲಾಗಿತ್ತು. ಜ್ವರ ಬಂದರೂ ಸಿಬ್ಬಂದಿ ಔಷಧ ನೀಡುತ್ತಿರಲಿಲ್ಲ. ಮೂರ್ನಾಲ್ಕು ಬಾರಿ ಕರೆದ ನಂತರ ಬಂದು ರೋಗಿಯನ್ನು ನೋಡುತ್ತಿದ್ದರು. ಹಣ ಇದ್ದರೆ ಆತನ ಕುಟುಂಬಸ್ಥರು ಬೇರೆಡೆ ತೋರಿಸುತ್ತಿದ್ದೆವು. ಆದರೆ, ಅವರು ಬಡವರು ಸರಕಾರಿ ಆಸ್ಪತ್ರೆ ನಂಬಿಕೊಂಡು ಬಂದಿದ್ದಾರೆ, ವೈದ್ಯರು ನೋಡಿ ಹೋಗುತ್ತಾರೆ. ಸಿಬ್ಬಂದಿಗೆ ಅವರ ಗೋಳು ಅರ್ಥ ಆಗುವುದಿಲ್ಲ ಎಂದು ಗುತ್ತೇದಾರ ಆರೋಪಿಸಿದ್ದಾರೆ.ಸರ್ಕಾರ ಕೂಡಲೆ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಜಿಮ್ಸ್ ನಲ್ಲಿ ಸರಣಿ ನಿರ್ಲಕ್ಷ್ಯ:
ಜಿಮ್ಸ್‍ನಲ್ಲಿ ಕೆಲವು ದಿನಗಳ ಹಿಂದೆ ಗರ್ಭಕೋಶ ಸಮಸ್ಯೆಯಿಂದ ದಾಖಲಾಗಿದ್ದ ಮಹಿಳಾ ರೋಗಿಯೊಬ್ಬರಿಗೆ ‘ಒ’ ನೆಗೆಟಿವ್ ರಕ್ತ ಬದಲು ‘ಒ’ ಪಾಸಿಟಿವ್ ರಕ್ತ ತರುವಂತೆ ಚೀಟಿ ಬರೆದು ಅಚಾತುರ್ಯ ನಡೆಸಿದ್ದರು. ಇದಕ್ಕೂ ಮುನ್ನ ಸಿಬ್ಬಂದಿ ಸರಿಯಾಗಿ ಸ್ಪಂದನೆ ನೀಡುವುದಿಲ್ಲ ಎಂದು ದೂರು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದಕ್ಕೂ ಮುನ್ನ ಶಿಶುವೊಂದನ್ನು ಕಳ್ಳತನ ಮಾಡಲಾಗಿತ್ತು. ಜಿಮ್ಸ್ ಆಸ್ಪತ್ರೆಯಲ್ಲಿ ನಾಯಿಗಳು, ಸ್ವಚ್ಛತೆ ಇಲ್ಲದಿರುವುದು, ಕುಡಿಯುವ ನೀರಿನ ಕಾರಣ ಸದಾ ಸುದ್ದಿಯಲ್ಲಿದೆ. ಇದೀಗ ಬಡ ರೈತನಿಗೂ ಚಿಕಿತ್ಸೆ ನೀಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಮಾಡಿರುವುದು ಬೆಳಕಿಗೆ ಬಂದಿದೆ. ರೈತನ ಕೈಯಿಂದ ತೀವ್ರ ರಕ್ತ ಸೋರಿಕೆಯಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ತನಗೆ ಗೊತ್ತಿಲ್ಲದಂತೆ ವರ್ತಿಸುತ್ತಿರುವ ಆಸ್ಪತ್ರೆ ವೈದ್ಯರು, 10 ಎಂಎಲ್ ನಷ್ಟು ರಕ್ತ ಮಾತ್ರ ಚೆಲ್ಲಿದೆ. ಅದು ನಿರ್ಲಕ್ಷ್ಯವಲ್ಲ ಎಂಬ ಸಮರ್ಥಿಸಿಕೊಂಡಿದ್ದಾರೆ ಎಂದು ಬಾಲರಾಜ್ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದರು.