
ಯಾದಗಿರಿ:ಮೇ.10: ಬದುಕಿನಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ದುಡಿಮೆ ಮತ್ತು ಆತ್ಮವಿಶ್ವಾಸ ಇದ್ದರೆ ಜೀವನವನ್ನು ಸಾಗಿಸಬಹುದು ಎಂಬುದಕ್ಕೆ ಯಾದಗಿರಿ ನಗರದ ಹೂನಿಗೇರಾ (ಕೋಲಿವಾಡ) ನಿವಾಸಿ ಆಟೋ ಚಾಲಕ ಸಾಬಣ್ಣ ಭಜಂತ್ರಿ (ಅಹಮದಾಬಾದ್) ಅವರು ಜೀವಂತ ಉದಾಹರಣೆಯಾಗಿದ್ದಾರೆ. ಕಳೆದ 36 ವರ್ಷಗಳಿಂದ ದುಡಿಮೆಯನ್ನೇ ಜೀವನದ ಆಧಾರವಾಗಿಸಿಕೊಂಡಿರುವ ಅವರು, ಅನೇಕ ಏರುಪೇರುಗಳ ನಡುವೆಯೂ ಇಂದು ಮತ್ತೆ ಬಾಡಿಗೆ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಮೂಲತಃ ಯಾದಗಿರಿ ಜಿಲ್ಲೆಯವರಾದ ಸಾಬಣ್ಣ ಭಜಂತ್ರಿ ಅವರು ಉದ್ಯೋಗದ ಹುಡುಕಾಟದಲ್ಲಿ ಹಲವು ವರ್ಷಗಳ ಹಿಂದೆ ಅಹಮದಾಬಾದ್‍ಗೆ ವಲಸೆ ಹೋಗಿದ್ದರು. ಅಲ್ಲಿ ಆಟೋ ಚಾಲಕರಾಗಿ ದುಡಿದು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು, ಬಳಿಕ 1995ರಲ್ಲಿ ಯಾದಗಿರಿಗೆ ಮರಳಿ ಹೊಸ ಬದುಕು ಕಟ್ಟಿಕೊಳ್ಳಲು ಮುಂದಾದರು. ಕುಟುಂಬದ ಭವಿಷ್ಯ ಉತ್ತಮವಾಗಿರಲಿ ಎಂಬ ಆಶಯದಿಂದ ಹೋಟೆಲ್ ವ್ಯವಹಾರ, ಗ್ಯಾರೇಜ್ ಬಿಸಿನೆಸ್ ಸೇರಿದಂತೆ ಹಲವು ಸಣ್ಣ-ಪುಟ್ಟ ಉದ್ಯಮಗಳಲ್ಲಿ ತೊಡಗಿಕೊಂಡು ತಮ್ಮದೇ ಆದ ಗುರುತನ್ನು ಸಮಾಜದಲ್ಲಿ ನಿರ್ಮಿಸಿಕೊಂಡಿದ್ದರು.
ನಾಲ್ಕು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾಂಟೀನ್ ನಡೆಸುವ ಮೂಲಕವೂ ಜೀವನ ಸಾಗಿಸುತ್ತಿದ್ದರು. ಆದರೆ ಕಾಲಕ್ರಮೇಣ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗದೆ ಆರ್ಥಿಕ ಸಂಕಷ್ಟ ಎದುರಾಯಿತು. ಇದೇ ವೇಳೆ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ತಮ್ಮ ಮಕ್ಕಳು ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಕೆಲವು ಚಟುವಟಿಕೆಗಳಲ್ಲಿ ತೊಡಗಿ ವ್ಯಾಪಾರದಲ್ಲಿ ನಷ್ಟ ಉಂಟುಮಾಡಿ, ಕೊನೆಗೆ ತಂದೆಯನ್ನೇ ದೂರವಿಟ್ಟಿದ್ದಾರೆ ಎಂದು ಸಾಬಣ್ಣ ಭಜಂತ್ರಿ ಅವರು ಪತ್ರಕರ್ತರ ಮುಂದೆ ಕಣ್ಣೀರಿನಿಂದ ಆರೋಪಿಸಿದರು.
ಕುಟುಂಬದಿಂದ ದೂರವಾಗಿರುವ ನೋವಿನ ನಡುವೆಯೂ ಅವರು ಬದುಕಿನ ಹೋರಾಟವನ್ನು ನಿಲ್ಲಿಸಿಲ್ಲ. ಪ್ರಸ್ತುತ ಮತ್ತೆ ಆಟೋ ಚಾಲಕರಾಗಿ ದುಡಿಯುತ್ತಿರುವ ಸಾಬಣ್ಣ ಭಜಂತ್ರಿ ಅವರು, ವಯಸ್ಸಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ. ಒಂಟಿತನ, ಆರ್ಥಿಕ ಸಮಸ್ಯೆ ಮತ್ತು ಕುಟುಂಬದ ನೋವಿನ ನಡುವೆಯೂ ಸಮಾಜಸೇವೆಯ ಮನೋಭಾವವನ್ನು ಉಳಿಸಿಕೊಂಡಿರುವುದು ವಿಶೇಷವಾಗಿದೆ.
ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಿರುವ ಅವರು, ಅಂಗವಿಕಲರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಸೇವೆ ಒದಗಿಸಿ ಮಾನವೀಯತೆಯ ಮಾದರಿಯಾಗಿದ್ದಾರೆ. ಸಂಕಷ್ಟಗಳ ನಡುವೆಯೂ ಇತರರ ಕಷ್ಟಕ್ಕೆ ಸ್ಪಂದಿಸುವ ಅವರ ಮನೋಭಾವ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಕುಟುಂಬದ ಅಸಹಕಾರ, ಆರ್ಥಿಕ ಸಂಕಷ್ಟ ಮತ್ತು ಏಕಾಂತ ಬದುಕಿನ ನೋವಿನ ನಡುವೆಯೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಸಾಗುತ್ತಿರುವ ಆಟೋ ಚಾಲಕ ಸಾಬಣ್ಣ ಭಜಂತ್ರಿ (ಅಹಮದಾಬಾದ್) ಅವರ ಬದುಕಿನ ಕಥೆ ಇದೀಗ ಯಾದಗಿರಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವರ ಮನಸ್ಸಿಗೆ ಸ್ಪರ್ಶಿಸಿದೆ.























