Home ಜಿಲ್ಲೆ ತುಮಕೂರು ಫೊಕ್ಸೋ ಕಾಯ್ದೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ

ಫೊಕ್ಸೋ ಕಾಯ್ದೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ

ಗುಬ್ಬಿ, ನ. ೨- ಹದಿನೆಂಟು ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ಯ ಬಗ್ಗೆ ಪ್ರತಿಯೊಬ್ಬ ಮಗುವಿಗೂ ಅರಿವು ಮೂಡಿಸುವುದು ಅಗತ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ. ಕಿರಣ್ ಹೇಳಿದರು.


ತಾಲ್ಲೂಕಿನ ಹೇರೂರು ಗ್ರಾಮದ ಭೂಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಗುಬ್ಬಿ, ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ’ಸುರಕ್ಷಿತ ಬಾಲ್ಯ ಅಭಿಯಾನ’ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕರ್ನಾಟಕ ರಾಜ್ಯ ಪಠ್ಯಪುಸ್ತಕ ಇಲಾಖೆಯು ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ಪಾಠಗಳನ್ನು ಅಳವಡಿಸಿದೆ. ಮಕ್ಕಳು ಯಾವುದೇ ರೀತಿಯ ಅಹಿತಕರ ವರ್ತನೆ ಅಥವಾ ಕಿರುಕುಳಕ್ಕೆ ಒಳಗಾದರೆ ಹೆದರದೆ ಪೋಷಕರು, ಶಿಕ್ಷಕರು ಅಥವಾ ನಂಬಿಕಸ್ಥ ವ್ಯಕ್ತಿಗಳ ಗಮನಕ್ಕೆ ತರಬೇಕು. ಅಲ್ಲದೆ, ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಕರೆ ಮಾಡಿ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.


ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಶ್ವರಿ ಮಾತನಾಡಿ, ೧೮ ವರ್ಷದೊಳಗಿನ ಎಲ್ಲ ಮಕ್ಕಳ ರಕ್ಷಣೆಗಾಗಿ ೨೦೧೨ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ತಾರತಮ್ಯವಿಲ್ಲ. ಮಕ್ಕಳ ಮೇಲೆ ಲೈಂಗಿಕ ಶೋಷಣೆ ಅಥವಾ ಕಿರುಕುಳ ಎಸಗುವವರಿಗೆ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದರು.


ವಕೀಲರ ಸಂಘದ ಉಪಾಧ್ಯಕ್ಷ ಸಿ.ಕೆ. ರವೀಂದ್ರ ಮಾತನಾಡಿ, ಮಕ್ಕಳಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಭೂಮಿ ಪಬ್ಲಿಕ್ ಸ್ಕೂಲ್ ಶೈಕ್ಷಣಿಕ ನಿರ್ದೇಶಕ ಧನಂಜಯ್, ಸಹಾಯಕ ಸರ್ಕಾರಿ ಅಭಿಯೋಜಕಿ ಕುಮಾರಿ ಅಕ್ಷತಾ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ರವೀಶ್, ಪ್ರಾಂಶುಪಾಲೆ ಮೆಹನಜ್ ಖಾದ್ರಿ, ಮುಖ್ಯಶಿಕ್ಷಕಿ ಜಿ.ಎಸ್. ಭವ್ಯ ಮತ್ತಿತರರು ಭಾಗವಹಿಸಿದ್ದರು.