
ಯಾದಗಿರಿ :ಮೇ.೧೨:ನಗರದ ವಾರ್ಡ್ ಸಂಖ್ಯೆ ೨೨ರ ವಾಲ್ಮೀಕಿ ನಗರ (ದುಖಾನ್ ವಾಡಿ) ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಯುವ ಮುಖಂಡ ಗುರುರಾಜ್ ಬಗ್ಲಿ ಆರೋಪಿಸಿದರು.
ಈ ಕುರಿತು ಸೋಮವಾರ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನೀರಿನ ಸಮಸ್ಯೆ ಕುರಿತು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.
ನಗರದಲ್ಲಿ ಈಗಾಗಲೇ ಉಷ್ಣಾಂಶ ಏರಿಕೆಯಾಗಿದ್ದು, ರಣಬಿಸಿಲಿನ ತಾಪಕ್ಕೆ ಜನ ಹಾಗೂ ಜಾನುವಾರುಗಳು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಾಲ್ಮೀಕಿ ನಗರದಲ್ಲಿ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿರುವುದು ನಿವಾಸಿಗಳ ದಿನನಿತ್ಯದ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದೂರಿದರು.
“ಸಂಬAಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾಶ್ವತ ಪರಿಹಾರ ಕಲ್ಪಿಸಿ ನಿಯಮಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು,” ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳ ಜೊತೆಗೆ ನಗರ ಪ್ರದೇಶಗಳಲ್ಲಿಯೂ ನೀರಿನ ಬವಣೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಎಚ್ಚೆತ್ತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾಯಿಬಣ್ಣ ಬಗ್ಲಿ, ರಾಜಪ್ಪ ಕಲ್ಪಟ್ಟಿ, ದೇವಮ್ಮ ಬಗ್ಲಿ, ಜಯಶ್ರೀ ನಾಯ್ಕೋಡಿ, ರೇಣುಕಮ್ಮ ಬಗ್ಲಿ, ದುರ್ಗಮ್ಮ ಬಗ್ಲಿ, ಇಂದ್ರಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.























