Home ಜಿಲ್ಲೆ ಬೆಂಗಳೂರು ಡಾ.ಸೋಮಶೇಖರ ದೀಕ್ಷಿತ್‌ಗೆ ಹಂಸ ಸಮ್ಮಾನ್ ಪ್ರಶಸ್ತಿ

ಡಾ.ಸೋಮಶೇಖರ ದೀಕ್ಷಿತ್‌ಗೆ ಹಂಸ ಸಮ್ಮಾನ್ ಪ್ರಶಸ್ತಿ

ಕೋಲಾರ,ಮಾ.೨೦- ಕೋಲಾರಮ್ಮ ದೇವಾಲಯದ ಪ್ರಧಾನ ಅರ್ಚಕ ಡಾ. ಸಿ.ಸೋಮಶೇಖರ ದೀಕ್ಷಿತ್ ಅವರಿಗೆ ಮಾ ೧೬ರಂದು ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಂಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ.


ಕಾರ್ಯನಿರ್ವಾಹಕ ಸಂಸ್ಥಾಪಕ ವ್ಯವಸ್ಥಾಪಕ ಎಂ.ಮುರಳೀಧರ, ವಿಶ್ರಾಂತ ನ್ಯಾಯಮೂರ್ತಿ ಸಂತೋಷ್‌ಹೆಗಡೆ, ಲೋಕಾಯುಕ್ತ ಬಿ.ವೀರಪ್ಪ ಇವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಡಾ. ಸಿ.ಸೋಮಶೇಖರ ದೀಕ್ಷಿತ್: ೧೯೬೩ರ ಮಾರ್ಚ್ ೨೩ರಂದು ಶ್ರೀ ಎಸ್.ಚಂದ್ರಶೇಖರ್ ದೀಕ್ಷಿತ್ ಮತ್ತು ಶ್ರೀಮತಿ ಗಿರಿಜಮ್ಮ ದಂಪತಿಗಳ ಮಗನಾಗಿ ಕೋಲಾರದಲ್ಲಿ ಜನಿಸಿ, ಎಸ್.ಎಸ್.ಎಲ್.ಸಿ.ವರೆವಿಗೂ ವಿದ್ಯಾಭ್ಯಾಸವನ್ನು ಪಡೆದ ನಂತರ ವೇದಶಾಸ್ತ್ರ ಹಾಗೂ ಆಗಮ ಶಾಸ್ತ್ರಗಳಲ್ಲಿ ಅಧ್ಯಯನ ನಡೆಸಿ ಅದರಲ್ಲಿ ಪರಿಣತಿಯನ್ನು ಪಡೆದರು.

ನಂತರ ವಂಶಪರಂಪರ್ಯವಾಗಿ ಬಂದಂತಹ, ಅರ್ಚಕ ವೃತ್ತಿಯನ್ನು ಕೈಗೊಂಡು ಕೋಲಾರಮ್ಮ ದೇವಾಲಯ ಹಾಗೂ ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ವೃತ್ತಿಯನ್ನು ಕೈಗೊಂಡರು. ಇದಲ್ಲದೆ ಹಲವಾರು ದೇವಾಲಯಗಳಲ್ಲಿ ಉತ್ತಮ ಪೂಜಾ ಕಾರ್ಯಗಳು ನಡೆಯುವಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಕಳೆದ ೪೦ ವರ್ಷಗಳಿಂದ ಅರ್ಚಕ ವೃತ್ತಿಯೊಂದಿಗೆ ಶಿಥಿಲವಾದ ಹಲವಾರು ದೇವಾಲಯಗಳ ಅಭಿವೃದ್ಧಿ ಪಡಿಸಿದ್ದಾರೆ. ಕೋಲಾರ ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷರಾಗಿರುವುದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಹಾಗೂ ಅರ್ಚಕರ ಹಿತಚಿಂತಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆವಿಗೂ ಸಲ್ಲಿಸುತ್ತಿರುವ ಸೇವೆಗಾಗಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಒಳಗೊಂಡಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿರುತ್ತಾರೆ.


ಭಕ್ತ-ಭಗವಂತ ಇವರ ನಡುವಿನ ಸೇತುವೆಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಡಾ. ಸಿ.ಸೋಮಶೇಖರ ದೀಕ್ಷಿತ್ ಅವರ ಸೇವೆಯನ್ನು ಪರಿಗಣಿಸಿ ಹಂಸಜ್ಯೋತಿ ಸಂಸ್ಥೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ಹಂಸ ಸಾಂಸ್ಕೃತಿಕ ಸೌರಭ ಹಾಗೂ ಹಂಸಸಮ್ಮಾನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಂಸ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ.