Home ಜಿಲ್ಲೆ ಶೈಕ್ಷಣಿಕ ಕ್ರಾಂತಿಯ ರೂವಾರಿಯಾಗಿದ್ದಾರೆ ಡಾ. ಬಸವಲಿಂಗ ಪಟ್ಟದ್ದೇವರು: ಶಾಸಕ ಪ್ರಭು ಚವ್ಹಾಣ

ಶೈಕ್ಷಣಿಕ ಕ್ರಾಂತಿಯ ರೂವಾರಿಯಾಗಿದ್ದಾರೆ ಡಾ. ಬಸವಲಿಂಗ ಪಟ್ಟದ್ದೇವರು: ಶಾಸಕ ಪ್ರಭು ಚವ್ಹಾಣ

ಔರಾದ್:ಮಾ.೨: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹತ್ತಾರು ಗುಣಾತ್ಮಕ ಶಾಲೆಗಳನ್ನು ಸ್ಥಾಪಿಸಿ ಸುಮಾರು ೨೫ ವರ್ಷಗಳಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಅವರು ಶೈಕ್ಷಣಿಕ ಕ್ರಾಂತಿಯ ರೂವಾರಿಯಾಗಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಪಟ್ಟಣದ ಬಸವ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಮಠ ಸಂಸ್ಥಾನದಿAದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಕಾರ ಇದ್ದರೇನೆ ವಿದ್ಯೆಗೆ ಬೆಲೆ ಬರುತ್ತದೆ. ಅಕ್ಷರಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಅಗತ್ಯವಾಗಿದೆ. ಅಂತಹ ಕಾರ್ಯವನ್ನು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಡಾ. ಬಸವಲಿಂಗ ಪಟ್ಟದ್ದೇವರು ನೀಡುತ್ತಿರುವ ಶಿಕ್ಷಣ ರಾಜ್ಯಕ್ಕೆ ಮಾದರಿಯಾಗಿದೆ. ಅನಾಥ ಶಿಶುಗಳ ಪಾಲಿನ ಆರಾಧ್ಯ ದೇವರಾದ ಅವರು ಅಪರೂಪದ ಸಂತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಸವಣ್ಣನವರ ಆದರ್ಶಗಳು ಹಾಗೂ ಡಾ. ಚನ್ನಬಸವ ಪಟ್ಟದ್ದೇವರು ಹಾಕಿದ ಮಾರ್ಗದಲ್ಲಿ ಸಾಗುತ್ತಿರುವ ಪಟ್ಟದ್ದೇವರು ಧರ್ಮಪ್ರಚಾರದ ಜೊತೆಗೆ ಶೈಕ್ಷಣಿಕ ಕ್ರಾಂತಿಗೂ ಚಾಲನೆ ನೀಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು. ಇಂದಿನ ದಿನಮಾನಗಳಲ್ಲಿ ಗುರುಕುಲ ವಸತಿ ಶಾಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಮನುಷ್ಯನ ಜೀವನದ ವಿಕಾಸ ಮತ್ತು ಉನ್ನತಿಗೆ ಶಿಕ್ಷಣ ಅತ್ಯಾವಶ್ಯಕ. ಭೌತಿಕ ವಿದ್ಯೆಯಿಂದ ಸಿರಿ-ಸಂಪತ್ತು ಗಳಿಸಬಹುದು. ಆದರೆ ಸಂಸ್ಕಾರಯುತ ಶಿಕ್ಷಣ ಜೀವನವನ್ನು ಹಸನಾಗಿಸುತ್ತದೆ ಎಂದು ಸಲಹೆ ನೀಡಿದರು. ಪಾಲಕರು, ಶಿಕ್ಷಕರು ಹಾಗೂ ಪರಿಸರ ಸಂಸ್ಕಾರಯುತವಾಗಿದ್ದರೆ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ. ಶಿಕ್ಷಣದಿಂದ ಮಾತ್ರ ಭಾರತ ಅಭಿವೃದ್ಧಿ ಸಾಧಿಸಬಹುದು ಎಂದರು.
ಭಾಲ್ಕಿ ಶ್ರೀ ಮಹಾಲಿಂಗ ದೇವರು ಮಾತನಾಡಿ, ವಿದ್ಯಾರ್ಥಿಗಳು ಸರ್ವಾಂಗೀಣ ವಿಕಾಸಕ್ಕಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಶಿಕ್ಷಕರು ಧನಾತ್ಮಕ ಮನೋಭಾವ ಬೆಳೆಸಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ಬಾಳು ಬೆಳಗುವ ಶಿಲ್ಪಿಗಳಾಗಬೇಕು ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಆಡಳಿತಾಧಿಕಾರಿ ಮೋಹನ್ ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಮಾಜಿ ಪುರಸಭೆ ಅಧ್ಯಕ್ಷೆ ಸುರುಬಾಯಿ ಘೂಳೆ, ಪ್ರಕಾಶ ಘೂಳೆ, ಶರಣಪ್ಪ ಚಿಟಮೇ, ಶಾಂತಕುಮಾರ ಎಡವೆ, ಅಕ್ಷಯ್ ಕಸ್ತೂರೆ, ಗುರುಪ್ರಿತ್ ಕೌರ್, ರಜನಿಕಾಂತ ಮಲಗೆ, ಅಮರ ನಿಶ್ಪತೆ, ಗುರುನಾಥ ಕಸ್ತೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲೆ ಸುಚರಿತಾ ರಡ್ಡಿ ಸ್ವಾಗತಿಸಿದರು. ಸುಜತಾ ಕೋಟೆ ಹಾಗೂ ನಾಗನಾಥ ಶಂಕು ಕಾರ್ಯಕ್ರಮ ನಿರೂಪಿಸಿದರು.

ಚವ್ಹಾಣ ಮಸ್ತ್ ಡ್ಯಾನ್ಸ್

ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಪ್ರಭು ಚವ್ಹಾಣ ಮಕ್ಕಳೊಂದಿಗೆ ಮಸ್ತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ನೃತ್ಯ ಪ್ರದರ್ಶನದ ವೇಳೆ ವೇದಿಕೆಗೆ ಬಂದ ಶಾಸಕ ಚವ್ಹಾಣ, ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಕೆಲಕ್ಷಣಗಳಲ್ಲಿ ವೇದಿಕೆಯ ವಾತಾವರಣ ಹಬ್ಬದ ಸಂಭ್ರಮಕ್ಕೆ ತಿರುಗಿತು. ಮಕ್ಕಳ ಜೊತೆ ಕುಣಿದ ಶಾಸಕರ ಸರಳತೆ ಮತ್ತು ಆತ್ಮೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಸಕರು ಮಕ್ಕಳೊಂದಿಗೆ ಕುಣಿಯುತ್ತಿರುವ ದೃಶ್ಯ ಕಂಡ ಪಾಲಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಹುರಿದುಂಬಿಸಿದರು. ವಿದ್ಯಾರ್ಥಿಗಳಲ್ಲೂ ಹೊಸ ಉತ್ಸಾಹ ಮೂಡಿದ್ದು, ಕಾರ್ಯಕ್ರಮ ಮತ್ತಷ್ಟು ಕಳೆಗುಂದಿತು.
ಶಿಕ್ಷಕರು ಮತ್ತು ಪಾಲಕರು ಶಾಸಕರ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕುದುರೆ ಮೇಲೆ ಶಾಸಕರಿಗೆ ಸ್ವಾಗತ

ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಸಕ ಪ್ರಭು ಚವ್ಹಾಣ ಅವರನ್ನು ಕುದುರೆ ಮೇಲೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಶಾಸಕರು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವಾದ್ಯಘೋಷಗಳ ನಡುವೆ ಅದ್ಧೂರಿ ಮೆರವಣಿಗೆ ನಡೆಯಿತು. ಕುದುರೆ ಮೇಲೇರಿದ ಶಾಸಕರಿಗೆ ಶಾಲೆಯ ಶಿಕ್ಷಕರು, ಹಿರೇಮಠ ಸಂಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಮೆರವಣಿಗೆಯ ದೃಶ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ಶಾಸಕರಿಗೆ ಈ ರೀತಿಯ ಸಂಭ್ರಮದ ಸ್ವಾಗತ ನೀಡಿರುವುದು ಎಲ್ಲರ ಗಮನ ಸೆಳೆಯಿತು.

ಗಮನ ಸೆಳೆದ ಪಟ್ಟದ್ದೇವರ ನಾಟಕ

ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕ ಎಲ್ಲರ ಗಮನ ಸೆಳೆಯಿತು.
ಹಿರೇಮಠ ಸಂಸ್ಥಾನದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು ಅವರ ಜೀವನ ಸಾಧನೆ ಮತ್ತು ಸಮಾಜಸೇವೆಯನ್ನು ಆಧರಿಸಿದ ಕಿರುನಾಟಕವನ್ನು ಮಕ್ಕಳು ಮನಮೋಹಕವಾಗಿ ಪ್ರದರ್ಶನ ಮಾಡಿದರು.
ಪಟ್ಟದ್ದೇವರ ಶಿಕ್ಷಣ, ಧರ್ಮಪ್ರಚಾರ ಹಾಗೂ ಅನಾಥ-ಬಡ ಮಕ್ಕಳ ಮೇಲಿನ ಕಾಳಜಿಯನ್ನು ಮನದಟ್ಟಾಗಿಸುವ ರೀತಿಯಲ್ಲಿ ಕಥಾಹಂದರ ರೂಪಿಸಲಾಗಿತ್ತು. ವಿದ್ಯಾರ್ಥಿಗಳ ಅಭಿನಯ, ಸಂಭಾಷಣೆ ಹಾಗೂ ವೇದಿಕೆ ವಿನ್ಯಾಸ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.