
ಬೀದರ: ಮೇ.1:ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನೀತಿಯನ್ನು ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮಾತ್ರ ಸೀಮಿತವಲ್ಲ. ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ನಗರದ ಅಂಬೇಡ್ಕರ್ ವೃತ್ತದ ಸಮೀಪ ಬೀದರ ಜಿಲ್ಲಾ ಸಕಲ ಮರಾಠಾ ಸಮಾಜದ ವತಿಯಿಂದ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರರು 56 ವಿಷಯಗಳನ್ನು 9 ಭಾಷೆಗಳಲ್ಲಿ ಅಧ್ಯಯನ ಮಾಡಿ ಸುಮಾರು 34 ಪದವಿಗಳನ್ನು ಪಡೆದುಕೊಂಡ ಮಹಾನ್ ತತ್ವಜ್ಞಾನಿಯಾಗಿದ್ದರು. ಹರಿದು ಹಂಚಿಹೋಗಿದ್ದ ಭಾರತದ ಕಾನೂನು ಸುವ್ಯವಸ್ಥೆಯನ್ನು ಸಂವಿಧಾನದ ಮೂಲಕ ಒಂದು ಚೌಕಟ್ಟನ್ನು ಹಾಕಿಕೊಟ್ಟ ಅಖಂಡ ಭಾರತದ ಮಹಾನಾಯಕ ಅಂಬೇಡ್ಕರ್ ಅವರಾಗಿದ್ದಾರೆ ಎಂದರು. ಸಯ್ಯಾಜಿರಾವ ಗಾಯಕವಾಡ ಮತ್ತು ಶಾಹು ಮಹಾರಾಜ್ ಇವರಿಬ್ಬರು ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಲು ವಿದೇಶಕ್ಕೆ ಕಳುಹಿಸಿದ್ದರು. ಹೀಗಾಗಿ ಈ ಮೂವರ ಮಧ್ಯೆ ಅವಿನಾಭಾವ ಸಂಬಂಧವಿತ್ತು. ಈ ಕಾರಣಕ್ಕಾಗಿಯೇ 60 ದೇಶದ ಸಂವಿಧಾನ ಅಧ್ಯಯನ ಮಾಡಿದ ಅಂಬೇಡ್ಕರರು ಬೃಹತ್ ಸಂವಿಧಾನ ರಚನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಲಾಡ್ ತಿಳಿಸಿದರು.
ಲಂಡನ್‍ನಲ್ಲಿ ಕಾರ್ಲಾಮಾಕ್ರ್ಸ್ ಪುತ್ಥಳಿ ಪಕ್ಕದಲ್ಲೇ ಡಾ. ಅಂಬೇಡ್ಕರರ ಮೂರ್ತಿ ಇದೆ. ಅಂತಹ ಮಹಾನ್ ವ್ಯಕ್ತಿತ್ವ ಅಂಬೇಡ್ಕರ್ ಅವರಲ್ಲಿತ್ತು. ಉಚಿತ ಶಿಕ್ಷಣ ಇಡೀ ದೇಶದ ಜನತೆಗೆ ನೀಡಬೇಕೆಂಬ ಪರಿಕಲ್ಪನೆ ಕೊಟ್ಟವರೇ ಅಂಬೇಡ್ಕರರು. ಸ್ಥಳೀಯವಾಗಿ ನ್ಯಾಯ ಸಿಗದೇ ಇದ್ದಾಗ ಕಲಂ 32ರ ಪ್ರಕಾರ ಸುಪ್ರಿಂ ಕೋಟ್ರ್ಗೆ ಹೋಗಿ ನ್ಯಾಯ ಪಡೆದುಕೊಳ್ಳುವ ಹಕ್ಕು ಡಾ. ಬಾಬಾ ಸಾಹೇಬರು ಈ ದೇಶದ ನಾಗರಿಕರಿಗೆ ನೀಡಿದ್ದಾರೆ ಎಂದು ಸಂತೋಷ ಲಾಡ್ ಪ್ರತಿಪಾದಿಸಿದರು.
ಹಿಂದೆ ಸಮಾಜದಲ್ಲಿ ಅಸ್ಕøಶ್ಯತೆ ಆಚರಣೆ ಜಾರಿಯಲ್ಲಿತ್ತು. ಚೌಡಾರ್ ಕೆರೆಯಲ್ಲಿ ನಾಯಿ ನರಿ ಹಂದಿ ಕುರಿಗಳು ನೀರು ಕುಡಿಯಬಹುದಿತ್ತು. ಆದರೆ ಮನುಷ್ಯರಾದ ದಲಿತ ಸಮಾಜದವರು ನೀರು ಕುಡಿಯುವಂತಿರಲಿಲ್ಲ. ಇಂತಹ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬರು ಹೋರಾಟ ಮಾಡಿ ಚೌಡಾರ್ ಕೆರೆ ನೀರು ಕುಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು. ಸತಿಸಹಗಮನ ಪದ್ಧತಿ ಆಚರಣೆಯಲ್ಲಿದ್ದ ಭಾರತದ ಮಹಿಳೆಗೆ ಪಿತ್ರಾರ್ಜಿತ, ಗಂಡನ ಆಸ್ತಿಯಲ್ಲಿ ಹಕ್ಕಿದೆ ಎಂದು ಪ್ರತಿಪಾದಿಸಿದವರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಹಿಂದೂ ಕೋಡ್ ಬಿಲ್ ಜಾರಿಗೆ ತಂದು ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ. ಮಹಿಳೆಯರು ಯಾವ ದೇವರಿಗೆ ದೀಪ ಹಚ್ಚುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿದಿನ ಅಂಬೇಡ್ಕರ್ ಅವರ ಮುಂದೆ ಒಂದು ಜ್ಯೋತಿ ಹಚ್ಚಲೇಬೇಕು ಎಂದು ಸಂತೋಷ ಲಾಡ್ ಹೇಳಿದರು. ಬಾಬಾ ಸಾಹೇಬರ ಅನುಯಾಯಿಗಳು ಅವರ ವಿಚಾರಗಳನ್ನು ಪ್ರತಿ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಜನತೆಗೆ ಲಾಡ್ ಸಲಹೆ ನೀಡಿದರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹಿಂಖಾನ್ ಮಾತನಾಡಿ ತಮ್ಮ ತಮ್ಮ ಸಮಾಜದ ನಾಯಕರ ಜಯಂತಿ ಆಚರಣೆ ಮಾಡುವುದು ಸಹಜ. ಆದರೆ ಡಾ. ಅಂಬೇಡ್ಕರರ ಜಯಂತಿಯನ್ನು ಇಂದು ಮರಾಠಾ ಹಾಗೂ ದಲಿತ ಸಮುದಾಯದವರು ಕೂಡಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಎಲ್ಲರೂ ಆಚರಣೆ ಮಾಡಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ದಾದಾ ಮಹಾರಾಜ್ ನಗರಕರ್ ಮಾತನಾಡಿ ಮರಾಠಾ ಸಮಾಜ ಹಾಗೂ ದಲಿತ ಸಮುದಾಯ ಒಂದಾಗಿರಬೇಕು. ಭಿನ್ನಾಭಿಪ್ರಾಯ ಇರಬಾರದು. ಐಕ್ಯತೆಯಿಂದ ಸಾಗಿದರೆ ಸಹೋದರತ್ವ ಮೂಡುತ್ತದೆ. ಡಾ. ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದಂತೆ ಎಲ್ಲಾ ಸಮಾಜದ ಮಹಾತ್ಮರ ಜಯಂತಿ ಮುಂದಿನ ದಿನಗಳಲ್ಲಿ ಆಚರಣೆ ಮಾಡಲಾಗುವುದು ಎಂದರು.
ಮೆಹಕರ್‍ನ ಶ್ರೀ ರಾಜಶೇಖರ ಶಿವಾಚಾರ್ಯರು ಮಾತನಾಡಿದರು. ಇದೇ ವೇಳೆ ಪೂಜ್ಯ ಭಂತೆ ವರಜ್ಯೋತಿ, ಪೂಜ್ಯ ಶ್ರೀ ಬೆಲ್ದಾಳ ಸಿದ್ಧರಾಮ ಶರಣರು, ಫಾದರ್ ಕ್ಲೇರಿ ಡಿಸೋಜಾ, ಶ್ರೀ ರಾಜಗುರು ಮಹಾರಾಜ್ ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಮುಖಂಡ ತರುಣ ನಾಗಮಾರಪಳ್ಳಿ, ಕರ್ನಾಟಕ ಲಿಡ್ಕರ್ ಅಧ್ಯಕ್ಷ ನಾಗರಾಜ್ ಮುಂಡರಗಿ, ಸಕಲ ಮರಾಠಾ ಸಮಾಜ ಸಂಯೋಜಕ ಪ್ರದೀಪ ಬಿರಾದಾರ, ಡಾ. ಭೀಮಸೇನರಾವ ಶಿಂಧೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ದಿಗಂಬರರಾವ ಮಾನಕಾರಿ, ಜನಾರ್ಧನ ಬಿರಾದಾರ, ವೆಂಕಟರಾವ ಮೆಂದೆ, ಅನೀಲ ಕಾಳೆ, ನಾರಾಯಣ ಗಣೇಶ, ಕೊಂಡಿಬಾ ಸಾಹುಕಾರ್, ಶಿವಾಜಿ ಕಾಳೆ, ಸತೀಶ ಮೂಳೆ, ತಾತ್ಯಾರಾವ ಪಾಟೀಲ, ರಘುನಾಥರಾವ ಜಾಧವ, ಮಾರುತಿ ಬೌದ್ಧೆ, ಶಿವಕುಮಾರ ನೀಲಿಕಟ್ಟಿ, ಅರುಣ ಪಟೇಲ್, ವಿಠಲದಾಸ ಪ್ಯಾಗೆ, ರಾಜಶೇಖರ ಸೇಡಂಕರ್, ಯಶಪಾಲ್ ಬೋರೆ, ವಿಜಯಕುಮಾರ ಸೋನಾರೆ, ಲುಂಬಿಣಿ ಗೌತಮ್, ಮೀನಾಕ್ಷಿ ಕಾಳೆ, ಅನೀತಾ ಭೋಸ್ಲೆ, ಕವಿತಾರೆಡ್ಡಿ, ಬಾಬು ಪಾಸ್ವಾನ್, ಮಹೇಶ ಗೋರನಾಳಕರ್, ರಮೇಶ ಡಾಕುಳಗಿ, ವಿಜಯಕುಮಾರ ಫನಾರ್ಂಡಿಸ್ ಹಿಪ್ಪಳಗಾಂವ, ಚಂದ್ರಕಾಂತ ಹಿಪ್ಪಳಗಾಂವ, ಡಾ. ಕಾಶಿನಾಥ ಚಲವಾ, ಅರುಣ ಪಟೇಲ್, ಕಲ್ಯಾಣರಾವ ಭೋಸ್ಲೆ, ಅಂಬರೀಶ ಕುದರೆ ಸೇರಿದಂತೆ ಹಲವರಿದ್ದರು.
ಶಿವಾಜಿರಾವ ಪಾಟೀಲ ಮುಂಗನಾಳ ಸ್ವಾಗತಿಸಿದರು. ವಿನೋದ ನಿರೂಪಿಸಿದರು. ವಿದ್ಯಾಸಾಗರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






















