
ಧಾರವಾಡ, ಏ.11: ಜಿಲ್ಲೆಯಲ್ಲಿ ಏಪ್ರೀಲ್ 23 ರಿಂದ ಮೇ 22, 2026 ರವರೆಗೆ ಜಿಲ್ಲೆಯ ಎಲ್ಲ ದನ ಹಾಗೂ ಎಮ್ಮೆಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಮನೆ ಬಾಗಲಿಗೆ ಬಂದು ರೈತರ ದನ ಹಾಗೂ ಎಮ್ಮೆಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಒಂಬತ್ತನೇಯ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆ ಜರುಗಿಸಿ, ಮಾತನಾಡಿದರು.
ರಾಜ್ಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಮೇಲುಸ್ತುವಾರಿ ಸಮಿತಿಯ ಸೂಚನೆಯಂತೆ, ಏಪ್ರೀಲ್ 23 ರಿಂದ ಮೇ 22, 2026 ರವರೆಗೆ ಒಂಬತ್ತನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ದನ ಹಾಗೂ ಎಮ್ಮೆಗಳಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಡಿ ರೈತರ ಮನೆ ಬಾಗಿಲಲ್ಲಿ ದನ ಮತ್ತು ಎಮ್ಮೆಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 116 ತಂಡಗಳನ್ನು ರಚಿಸಿದ್ದು, ಪ್ರತಿ ತಂಡದಲ್ಲಿ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಲಸಿಕದಾರರು ಇರುತ್ತಾರೆ.
ಜಿಲ್ಲೆಯಲ್ಲಿರುವ 1,36,865 ದನಗಳು ಹಾಗೂ 47,172 ಎಮ್ಮೆಗಳನ್ನು ಲಸಿಕಾಕರಣಕ್ಕೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ಪ್ರತಿ 100 ಜಾನುವಾರಗಳಿಗೆ ಒಂದು ಬ್ಲಾಕ್ ನಂತೆ, 1854 ಬ್ಲಾಕ್‍ಗಳನ್ನು ಮಾಡಲಾಗಿದೆ. ಈ ಬ್ಲಾಕ್‍ಗಳನ್ನು ಲಸಿಕೆ ಅವಧಿಯಲ್ಲಿ ಸಂಪೂರ್ಣವಾಗಿ ಲಸಿಕೆಗೆ ಒಳಪಡಿಸಲಾಗುವುದು. ಲಸಿಕಾ ಅಭಿಯಾನದ ನಂತರ, ಅಭಿಯಾನದಲ್ಲಿ ಬಿಟ್ಟು ಹೋಗಿರುವ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಕೇಂದ್ರ ಪುರಸ್ಕøತ ಜಾನುವಾರು ರೋಗಗಳ ನಿಯಂತ್ರಣ ಯೋಜನೆ ಅಡಿಯಲ್ಲಿ 2030 ರೊಳಗಾಗಿ ದೇಶವನ್ನು ಕಾಲುಬಾಯಿ ಬೇನೆ ಮುಕ್ತಗೊಳಿಸಲು ಸಂಕಲ್ಪ ಮಾಡಲಾಗಿದೆ. ದೇಶದ ದನ, ಎಮ್ಮೆಗಳು ಕಾಲುಬಾಯಿ ಬೇನೆ ಮುಕ್ತವಾದಲ್ಲಿ, ಜಾನುವಾರುಗಳ ಉತ್ಪನ್ನಗಳನ್ನು ಹೆಚ್ಚಿಸಿ, ರೈತರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ.100 ರಷ್ಟು ಗುರಿ ಸಾಧಿಸಲು ಸಹಕರಿಸಲು ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಮುಖ್ಯ ಪಶುವೈಧ್ಯಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು, ಧಾರವಾಡ ಹಾಲು ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.






















