Home ಜಿಲ್ಲೆ ವಿಕಲಚೇತನರಿಗೆ ೩೩ ಎಲೆಕ್ಟ್ರಾನಿಕ್ ಬೈಕ್ ವಿತರಣೆಅಭಿವೃದ್ಧಿ ಕೆಲಸಗಳಿಗೆ ತಕ್ಷಣ ಸ್ಪಂದನೆ: ಶಾಸಕ ಚನ್ನಾರೆಡ್ಡಿ ಪಾಟೀಲ್

ವಿಕಲಚೇತನರಿಗೆ ೩೩ ಎಲೆಕ್ಟ್ರಾನಿಕ್ ಬೈಕ್ ವಿತರಣೆಅಭಿವೃದ್ಧಿ ಕೆಲಸಗಳಿಗೆ ತಕ್ಷಣ ಸ್ಪಂದನೆ: ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ:ಮೇ.೧೧: ನಗರದ ಜನಸಂಪರ್ಕ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ವಿಕಲಚೇತನ ಫಲಾನುಭವಿಗಳಿಗೆ ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಜೂರಾದ ೩೩ ಎಲೆಕ್ಟ್ರಾನಿಕ್ ಬೈಕ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, “ಜನರು ತಮ್ಮ ಸಮಸ್ಯೆ ಹಾಗೂ ಅಭಿವೃದ್ಧಿ ಕೆಲಸಗಳಿಗಾಗಿ ಯಾವುದೇ ಮಧ್ಯವರ್ತಿಗಳ ಮೂಲಕ ಬಾರದೆಯೇ ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಸಾರ್ವಜನಿಕರ ಕೆಲಸಗಳಿಗೆ ತಕ್ಷಣ ಸ್ಪಂದಿಸುವುದು ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ” ಎಂದು ಸ್ಪಷ್ಟ ಸೂಚನೆ ನೀಡಿದರು.
ತಮ್ಮನ್ನು ಜನರು ಅಭಿವೃದ್ಧಿ ಕಾರ್ಯಗಳಿಗಾಗಿ ಆಯ್ಕೆ ಮಾಡಿದ್ದು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಅವರು ಹೇಳಿದರು. ರಸ್ತೆ, ಕುಡಿಯುವ ನೀರು, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿಕಲಚೇತನರು ಸಮಾಜದಲ್ಲಿ ಯಾರಿಗಿಂತಲೂ ಕಡಿಮೆಯಿಲ್ಲ. ಅವರಿಗೆ ಸೂಕ್ತ ಅವಕಾಶ ಮತ್ತು ಬೆಂಬಲ ದೊರೆತರೆ ಸಾಧನೆ ಮಾಡಲು ಸಾಧ್ಯವಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ವಿತರಿಸಲಾದ ಬೈಕ್‌ಗಳನ್ನು ಯಾವುದೇ ಕಾರಣಕ್ಕೂ ಇತರರಿಗೆ ನೀಡಬಾರದು ಅಥವಾ ಮಾರಾಟ ಮಾಡಬಾರದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ದುರುಪಯೋಗ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದರು.
ವಿಕಲಚೇತನರು ಸ್ವಯಂ ಉದ್ಯೋಗ ಹಾಗೂ ದೈನಂದಿನ ಕಾರ್ಯಗಳಿಗೆ ಈ ಬೈಕ್‌ಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್, ನಾಗಮ್ಮ, ಮಲ್ಲಿಕಾರ್ಜುನ ಈಟೆ, ಶರಣಗೌಡ ಬಲಕಲ್, ಖಾಜಾ ಮೊಹಿನುದ್ದೀನ್ ಮಿರ್ಚಿ, ಶರಣಬಸವ ಕೂರಕುಂದ, ತಿಮ್ಮಣ್ಣ ನಾಯಕ, ಜಲಾಲ್ ಬಬುಲಾದ್, ಬಾಪುಗೌಡ ಮೆಚನೂರು, ಅಶೋಕ್ ರೆಡ್ಡಿ ಕುರಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.