
ಕಲಬುರಗಿ,ಜೂ.14-ಬಿ.ಎಡ್ 2024-25ನೇ ಸಾಲಿನ ನಾಲ್ಕನೇ ಹಾಗೂ ಎರಡನೇ ಸೆಮಿಸ್ಟರ್ ಫಲಿತಾಂಶ ಕೂಡಲೇ ಪ್ರಕಟಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎಡ್.ವಿದ್ಯಾರ್ಥಿಗಳ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಸಂಬಂಧ ಸಮಿತಿ ಸಂಚಾಲಕ ತೇಜಸ್ ಆರ್.ಇಬ್ರಾಹಿಂಪೂರ್ ಅವರ ನೇತೃತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶ ಮತ್ತು ಅಂಕಪಟ್ಟಿಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದಿದೆ. ಯಾವುದೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆ ತೆಗೆದುಕೊಂಡರೂ 45 ದಿನದ ಒಳಗಾಗಿ ಫಲಿತಾಂಶ ಪ್ರಕಟಿಸಬೇಕೆಂಬ ನಿಯಮವಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯವು ಈ ನಿಯಮವನ್ನು ಕಡೆಗಣಿಸಿದೆ. ಇದರಿಂದಾಗಿ 2024-25ನೇ ಸಾಲಿನ ಬಿ.ಎಡ್. ವೃತ್ತಿ ಶಿಕ್ಷಣ ಪಡೆದು ಶಿಕ್ಷಕರಾಗಲು ಆಕಾಂಕ್ಷೆಗಳನ್ನು ಹೊತ್ತಿರವ ಪ್ರಶಿಕ್ಷಣಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಆದ್ದರಿಂದ ಬಿ.ಎಡ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ಮೂಲ ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣ ಪತ್ರ ಕೂಡಲೇ ನೀಡಬೇಕು, ಎಲ್ಲಾ ಸೆಮಿಸ್ಟರ್‍ಗಳ ಮೂಲ ಅಂಕಪಟ್ಟಿ ವಿತರಿಸಬೇಕು, ಅಕ್ರಮ ಅಂಕಪಟ್ಟಿ ನೀಡುವ ಮತ್ತು ಅಂಕಪಟ್ಟಿ ತಿದ್ದುವುದನ್ನು ನಿಲ್ಲಿಸಬೇಕು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಭಾಕರ ಚಿಂಚೋಳಿ, ಗಣೇಶ ಜಾಧವ್, ಜೈಭೀಮ, ರಕ್ಷಿತಾ, ಪೂಜಾ ಡೋಮನಾಳ, ಸಚಿನ್, ನಾಗೇಶ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.