ಭೀಕರ ಅಪಘಾತ:ನಾಲ್ವರ ಸಾವು

ಬಾಗಲಕೋಟೆ, ಡಿ.೩- ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.


ಸಿದ್ದಾಪುರ ಗ್ರಾಮದ ವಿಶ್ವನಾಥ್ (೧೭), ಪ್ರವೀಣ್ (೨೨), ಗಣೇಶ (೨೦) ಹಾಗೂ ಪ್ರಜ್ವಲ್ (೧೭) ಮೃತಪಟ್ಟವರು.


ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ನಿನ್ನೆ ತಡರಾತ್ರಿ ೧ ಗಂಟೆಯ ಸುಮಾರಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.


ಬಾಗಲಕೋಟೆ, ವಿಜಯಪುರ ಹೆದ್ದಾರಿಯ ಸಿದ್ದಾಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಟ್ರ್ಯಾಕ್ಟರ್ ಚಾಲಕನದ್ದು ಯಾವುದೇ ತಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಕಬ್ಬಿನ ಲೋಡ್ ಹಿಂಭಾಗ ಟ್ರ್ಯಾಕ್ಟರ್ ಚಾಲಕ ರಿಫ್ಲೆಕ್ಟರ್ ಕೂಡ ಅಳವಡಿಸಿದ್ದ. ಆದಾಗ್ಯೂ ವೇಗವಾಗಿ ಬಂದ ಕಾರು ಟ್ರ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ.


ಮತ್ತೊಂದೆಡೆ, ಕಾರು ಚಾಲಕ ಹಾಗೂ ಇತರರು ಮದ್ಯಪಾನ ಮಾಡಿದ ಸಂಶಯ ಕೂಡ ವ್ಯಕ್ತವಾಗಿದೆ. ಆದಾಗ್ಯೂ, ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.