
ಬೆಂಗಳೂರು, ಜು.೧- ರಾಜ್ಯ ಕಾಂಗ್ರೆಸ್‌ನಲ್ಲಿನ ಶಾಸಕರ ಅಸಮಾಧಾನ, ಮುನಿಸನ್ನು ತಣಿಸಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ೨ನೇ ದಿನವಾದ ಇಂದೂ ಸಹ ಹಲವು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದ್ದು, ಇಂದೂ ಸಹ ಹಲವು ಶಾಸಕರು ಕೆಲ ಸಚಿವರುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿ ದೂರುಗಳ ಸುರಿಮಳೆ ಗೈದರು.
ಶಾಸಕರ ಆಸಮಾಧಾನ, ಅತೃಪ್ತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲು ನಿನ್ನೆ ರಾಜ್ಯಕ್ಕೆ ಆಗಮಿಸಿ ಶಾಸಕರ ಜತೆ ಸಭೆ ನಡೆಸಿದ್ದ ಸುರ್ಜೆವಾಲಾ ಅವರ ಮುಂದೆ ನಿನ್ನೆಯೂ ಸಹ ಹಲವಾರು ಶಾಸಕರುಗಳು, ಸಚಿವರುಗಳ ವಿರುದ್ಧ ದೂರುಗಳ ಸರಮಾಲೆಯನ್ನೇ ಮುಂದಿಟ್ಟಿದ್ದರು.
ಸಚಿವರುಗಳು ತಮಗೆ ಸ್ಪಂದಿಸುತ್ತಿಲ್ಲ. ಅವರಿಗೆ ಬುದ್ಧಿ ಹೇಳಿ ಎಂದು ಒತ್ತಾಯಿಸಿದ್ದರು. ಇಂದೂ ಸಹ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಶಾಸಕರುಗಳು ದೂರಿನ ಸುರಿಮಳೆಗೈದಿದ್ದು, ಕೆಲ ಸಚಿವರುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸಚಿವರುಗಳು ನಮ್ಮ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಪತ್ರಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಹಲವು ಶಾಸಕರು ಇಂದೂ ಸಹ ಸುರ್ಜೆವಾಲಾ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಶಾಸಕರುಗಳ ದೂರು ದುಮ್ಮಾನಗಳನ್ನು ಆಲಿಸಿದ ಸುರ್ಜೇವಾಲಾ ಅವರು ಎಲ್ಲವನ್ನೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ, ಹೈಕಮಾಂಡ್‌ಗೂ ವರದಿ ಕೊಡುತ್ತೇನೆ, ಬಹಿರಂಗವಾಗಿ ಏನನ್ನೂ ಮಾತನಾಡಬೇಡಿ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂಬ ಭರವಸೆಯನ್ನೂ ಸುರ್ಜೇವಾಲಾ ಶಾಸಕರಿಗೆ ನೀಡಿದರು ಎನ್ನಲಾಗಿದೆ.
ಇಂದು ಸುರ್ಜೇವಾಲಾ ಅವರನ್ನು ಬೆಂಗಳೂರಿನ ಶಾಸಕರುಗಳಾದ ಎನ್. ಎ. ಹ್ಯಾರೀಸ್, ರಿಜ್ವಾನ್, ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ಆನೇಕಲ್ ಶಾಸಕ ಶಿವಣ್ಣ, ಎ.ಸಿ. ಶ್ರೀನಿವಾಸ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ, ಚಿಕ್ಕಮಗಳೂರಿನ ಶಾಸಕ ತಮ್ಮಯ್ಯ, ತರೀಕೆರೆ ಶಾಸಕ ಶಿವಶಂಕರ್, ರಾಮನಗರಿ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ, ಚನ್ನಪಟ್ಟಣ ಶಾಸಕ ಯೋಗೇಶ್ವರ್ ಸೇರಿದಂತೆ ಹಲವು ಶಾಸಕರು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಹಾಗೂ ರಾಜ್ಯ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ನಿನ್ನೆ ಕೋಲಾರ, ಚಿಕ್ಕಬಳ್ಳಾಪುರ ಕೈ ಶಾಸಕರು ಹಾಗೂ ವಸತಿ ಇಲಾಖೆಯ ಲಂಚಾವಾತಾರದ ಬಗ್ಗೆ ಪ್ರಶ್ನೆಗೆ ಬಿ.ಆರ್. ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಭೇಟಿ ಮಾಡಿದ್ದ ಸುರ್ಜೇವಾಲಾ ಅವರು, ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಪ್ರತ್ಯೇಕವಾಗಿಯೇ ಪ್ರತಿ ಶಾಸಕರನ್ನು ಭೇಟಿ ಮಾಡಿ ಸಚಿವರುಗಳ ಕಾರ್ಯವೈಖರಿ ಸರ್ಕಾರದ ಆಡಳಿತದ ಬಗ್ಗೆ ಶಾಸಕರಿಗೆ ಇರುವ ಅಭಿಪ್ರಾಯ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಎರಡು ವರ್ಷಗಳಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಸಿಕ್ಕಿರುವ ಅನುದಾನ ಎಲ್ಲದರ ಬಗ್ಗೆಯೂ ಮಾಹಿತಿಗಳನ್ನು ಪಡೆದುಕೊಂಡರು.
ನೂರಕ್ಕೂ ಹೆಚ್ಚು ಶಾಸಕರು ಸಿಎಂ ಬದಲಾವಣೆ ಬಯಸಿದ್ದಾರೆ:ಇಕ್ಬಾಲ್
ಕಾಂಗ್ರೆಸ್‌ನಲ್ಲಿ ನೂರಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬದಲಾಗಬೇಕು ಎಂದು ಬಯಸಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಾನು ಹೇಳಲ್ಲ. ಆದರೆ ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿರುವುದು ನಿಜ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷಕ್ಕಾಗಿ ಕಷ್ಟಪಟ್ಟಿದ್ದಾರೆ. ಎಲ್ಲ ಶ್ರಮ ಹಾಕಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ, ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಹಾಗಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂಬುದು ಹಲವು ಶಾಸಕರ ಇಚ್ಛೆಯಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆಯನ್ನು ನಾನು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರವರ ಮುಂದೆ ಇಡುತ್ತೇನೆ. ಇಂದು ಮಧ್ಯಾಹ್ನ ೩ ಗಂಟೆಗೆ ಸುರ್ಜೇವಾಲಾ ರವರು ನನ್ನನ್ನು ಭೇಟಿಗೆ ಕರೆದಿದ್ದಾರೆ. ಕ್ಷೇತ್ರದ ಸಮಸ್ಯೆ ಸೇರಿದಂತೆ ನನ್ನ ಅಹವಾಲನ್ನು ಸಲ್ಲಿಸಿದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಮಾಡಿ ಎಂಬ ನನ್ನ ಬೇಡಿಕೆಯನ್ನು ಸುರ್ಜೇವಾಲಾರವರ ಮುಂದೆ ಇಡುತ್ತೇನೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಎಂದು ಹೇಳಿದವರೇ ದಿನಾಂಕ ನಿಗದಿ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರವರನ್ನು ತಮ್ಮನ್ನು ಭೇಟಿ ಮಾಡಿದ ಶಾಸಕರ ಜತೆ ಎಲ್ಲವನ್ನು ಮಾತನಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಇಲ್ಲ ಎನ್ನುವುದಾದರೆ ನಾವು ಸುರ್ಜೇವಾಲಾರವರನ್ನು ಭೇಟಿ ಮಾಡುವುದರಲ್ಲಿ ಪ್ರಯೋಜನವೇನು, ಎಲ್ಲ ವಿಚಾರವನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಮುಂದೆ ಪಕ್ಷ ಸಂಘಟನೆ ಪ್ರಬಲವಾಗಿ ಆಗಬೇಕು ಎಂದರೆ ಸಚಿವರುಗಳು ಏನೇನೋ ಮಾತನಾಡುವುದಕ್ಕೆ ಕಡಿವಾಣ ಹಾಕಬೇಕು. ನಾನು ಸೇರಿದಂತೆ ಎಲ್ಲ ಶಾಸಕರಿಗೂ ಮಾತನಾಡದಂತೆ ಎಲ್ಲರನ್ನು ನಿಯಂತ್ರಿಸಬೇಕು. ಇದನ್ನು ನಾನು ಸುರ್ಜೇವಾಲಾರವರ ಮುಂದೆ ಹೇಳುತ್ತೇನೆ ಎಂದರು.