
ಏ. ೨೭ರಂದು ಕಲಬುರಗಿ ಚಲೋ
ಯಾದಗಿರಿ:ಏ.೧೬: ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಮಾಡು ಇಲ್ಲವೇ ಮಡಿ ಎಂಬ ಘೋಷ ವಾಕ್ಯದೊಂದಿಗೆ ಕಲಬುರಗಿ ಚಲೋ ಏಪ್ರಿಲ್ ೨೭ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷ ಡಾ. ಸರ್ದಾರ ರಾಯಪ್ಪ ಹೇಳಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರವು ೨೦೨೦ರಲ್ಲಿ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ೨೦೨೪ರ ಲೋಕಸಭೆ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದು ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ನೀಡುವುದನ್ನು ಕಾನೂನು ಬಾಹಿರವಾಗಿ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಇವತ್ತಿಗೂ ಕೂಡ ರಾಜ್ಯಾದ್ಯಂತ ತಳವಾರರಿಗೆ ಯಾವುದೇ ಸಮಸ್ಯೆ ಇಲ್ಲದೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ಸಿಂಧುತ ಪ್ರಮಾಣ ಪತ್ರ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದೆ ಎಲ್ಲ ಜನಪ್ರತಿನಿಧಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಮರಣ ಶಾಸನ ಬರೆಯುವ ಕೆಲಸ ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಹೇಳಿದರು.
ತಳವಾರ ಸಮಾಜದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಿಗದಂತೆ ಮಾಡಿ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಯಾವತ್ತೂ ಮೇಲಕ್ಕೆಳದಂತೆ ತುಳಿಯುತ್ತಿದ್ದಾರೆ ಎಂದರು.
ನಮ್ಮ ಸಮಾಜ ಮತ್ತು ಸಮುದಾಯದ ಮಕ್ಕಳ ಭವಿಷ್ಯವನ್ನೇ ಹಾಳು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಅಯ್ಯಪ್ಪ ತಳವಾರ, ರೇವಣಸಿದ್ದಪ್ಪ ಗೌಡ ಕಮಾನಮನಿ, ಭೀಮಣ್ಣ ಶಾಖಾಪೂರ, ಮೌನೇಶ್ವರ ತಳವಾರ್ ರಾಂಪೂರ .ಬಾಪುಗೌಡ ಮಾಲಿಪಾಟೀಲ, ಅಶೋಕ ಕಂಕಿ ನೆಲೋಗಿ, ಸಿದ್ದು ಯಲಬಾ ನಾರಾಯಣಪುರ, ಭೀಮರಾಯ ತಳವಾರ, ಪರಮಾನಂದ ತಳವಾರ,ಎಚ್.ಆರ್. ಬಡಿಗೇರ,ಶಿವಶಂಕರ ಇದ್ದರು.






















