Home ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕದಲ್ಲಿ ಹೊಸ ಆರು ಜಿಲ್ಲೆ ರಚಿಸಲು ಆಗ್ರಹ

ಕಲ್ಯಾಣ ಕರ್ನಾಟಕದಲ್ಲಿ ಹೊಸ ಆರು ಜಿಲ್ಲೆ ರಚಿಸಲು ಆಗ್ರಹ

ಕಲಬುರಗಿ,ಏ.29 : ಕೇಂದ್ರ ಸರಕಾರ ಬರುವ ದಿನಗಳಲ್ಲಿ ಲೋಕಸಭಾ ಸ್ಥಾನ,ವಿಧಾನ ಸಭಾ ಸ್ಥಾನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ಷೇತ್ರ ವಿಂಗಡಣೆ ಕಾರ್ಯ ಹಮ್ಮಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಲೋಕಸಭಾ ಸ್ಥಾನಗಳು ಹೆಚ್ಚಾಗಲು ಅದರಂತೆ, ವಿಧಾನ ಸಭಾ ಸ್ಥಾನಗಳು ವೃದ್ಧಿಯಾಗಲು ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಹೊಸ ಆರು ಜಿಲ್ಲೆಗಳು ಹೊಸ ಹನ್ನೆರಡು ತಾಲ್ಲೂಕುಗಳನ್ನು ರಚನೆ ಮಾಡುವುದು ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿಜಾಮ್ ಹೈದ್ರಾಬಾದ್ ರಾಜ್ಯದಲ್ಲಿ ಒಟ್ಟು 16 ಜಿಲ್ಲೆಗಳಲ್ಲಿ ತೆಲಂಗಾಣದ 8 ಜಿಲ್ಲೆಗಳು, ಹೈದರಾಬಾದ ಕರ್ನಾಟಕದ 3 ಜಿಲ್ಲೆಗಳು, ಮರಾಠವಾಡದ 5 ಜಿಲ್ಲೆಗಳು ಇದ್ದವು. ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ 8 ಜಿಲ್ಲೆಗಳಿದ್ದ ತೆಲಂಗಾಣ ಪ್ರದೇಶ ಚಂದ್ರಶೇಖರ ರಾವ್ ನೇತೃತ್ವದ ಸರಕಾರದ ಅವಧಿಯಲ್ಲಿ ನಾಲ್ಕು ಪಟ್ಟು ಜಿಲ್ಲೆಗಳನ್ನು ಹೆಚ್ಚಿಸಿದ್ದಾರೆ. ಅಂದರೆ ಪ್ರಸ್ತುತ ತೆಲಂಗಾಣದಲ್ಲಿ 33 ಜಿಲ್ಲೆಗಳು ಅಸ್ತಿತ್ವದಲ್ಲಿವೆ. ಇದು ತೆಲಂಗಾಣದ ಅಭಿವೃದ್ಧಿಗೆ ಮತ್ತು ಭವಿಷ್ಯದಲ್ಲಿ ಲೋಕಸಭಾ ಮತ್ತು ವಿಧಾನ ಸಭಾ ಸ್ಥಾನಗಳ ಅಭಿವೃದ್ಧಿಗೆ ಅನುಕೂಲವಾಗುವದೆಂಬ ದೂರ ದೃಷ್ಟಿಕೋನದ ಉದ್ದೇಶವಷ್ಟೇ ಅಲ್ಲದೆ, ಅಭಿವೃದ್ಧಿಗೆ ಪೂರಕವಾಗಿದೆ. ಪ್ರಸ್ತುತ ತೆಲಂಗಾಣದಲ್ಲಿ ಹೊಸ ಜಿಲ್ಲೆಗಳ ರಚನೆಯ ನಂತರ ಬಹುತೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಹ ಆಗಿರುವದಲ್ಲದೆ ಮಾನವ ಅಭಿವೃದ್ಧಿಯೂ ಸಹ ಎತ್ತರಕ್ಕೆ ಏರಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಹಳೆಯ ಹೈದ್ರಾಬಾದ ರಾಜ್ಯದಲ್ಲಿದ್ದ ಹೈದರಾಬಾದ ಕರ್ನಾಟಕದ ಮೂರು ಜಿಲ್ಲೆಗಳಾದ ಬೀದರ, ಕಲಬುರಗಿ ರಾಯಚೂರು ಈಗ ಕೊಪ್ಪಳ, ಯಾದಗಿರಿ ಸೇರಿ ಐದು ಜಿಲ್ಲೆಗಳಾಗಿವೆ. ಮದ್ರಾಸ್ ರಾಜ್ಯಕ್ಕೆ ಒಳಪಟ್ಟಿದ್ದ ಬಳ್ಳಾರಿ ಜಿಲ್ಲೆ ವಿಂಗಡಣೆಯಾಗಿ ವಿಜಯನಗರ ಹೊಸ ಜಿಲ್ಲೆಯಾಗಿ ಕಲ್ಯಾಣ ಕರ್ನಾಟಕದಲ್ಲಿ ಈಗ ಏಳು ಜಿಲ್ಲೆಗಳಾಗಿವೆ
ಕಲ್ಯಾಣ ಕರ್ನಾಟಕದಲ್ಲಿ ಹೊಸ ಜಿಲ್ಲೆಯಾಗಲು ಐತಿಹಾಸಿಕವಾಗಿ ತನ್ನದೇಯಾದ ಶ್ರೀಮಂತ ಇತಿಹಾಸ ಮೆರೆದಿರುವ ಮತ್ತು ಅಭಿವೃದ್ಧಿಗೆ ಪೂರಕವಾಗುವ ತಾಲ್ಲೂಕುಗಳಾದ ಸೇಡಂಗೆ ರಾಷ್ಟ್ರಕೂಟ ಜಿಲ್ಲೆ ಎಂದು, ಚಿತ್ತಾಪುರಕ್ಕೆ ನಾಗಾವಿ ಜಿಲ್ಲೆಯೆಂದು, ಐತಿಹಾಸಿಕವಾಗಿ ಮೆರೆದ ಸುರಪುರ ಅದರಂತೆಬಸವಕಲ್ಯಾಣ, ಸಿಂಧನೂರ, ಗಂಗಾವತಿ ತಾಲ್ಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕು
ಪ್ರಸ್ತುತ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳು ಕಡಿಮೆ ಇವೆ, ಇದರಿಂದ ಉತ್ತರ ಭಾರತ ಸತತ ಕೇಂದ್ರದಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಭವಿಷ್ಯದಲ್ಲಿ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗಬೇಕು ಎಂಬ ಧ್ವನಿ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಈ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು, ಸಂಪುಟ ಮತ್ತು ಶಾಸಕಾಂಗ ಗಂಭೀರವಾಗಿ ಪರಿಗಣಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.