Home ಜಿಲ್ಲೆ ತುಮಕೂರು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಲು ಕೇಂದ್ರಕ್ಕೆ ಒತ್ತಾಯ

ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಲು ಕೇಂದ್ರಕ್ಕೆ ಒತ್ತಾಯ

ತುಮಕೂರು, ನ. ೨- ಕನ್ನಡಿಗರ ಅಸ್ಮಿತೆಯಾಗಿರುವ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜಾರೋಹಣವನ್ನು ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.


ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿಯ ಸಂಕೇತವಾಗಿರುವ ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ಕೊಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಬಾವುಟಕ್ಕೆ ಮಾನ್ಯತೆ ನೀಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ನಮ್ಮ ಕನ್ನಡ ಬಾವುಟಕ್ಕೆ ಕೇಂದ್ರ ಸರ್ಕಾರ ಕಾನೂನು ಮಾನ್ಯತೆ ನೀಡಿ ಅಧಿಕೃತ ಸ್ಥಾನಮಾನ ಕೊಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಯವಾಗಿದೆ. ಕೇಂದ್ರ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಿದರೆ ಅದು ನಮ್ಮ ನಾಡು-ನುಡಿ, ಭಾಷೆಗೆ ಕೊಡುವ ಗೌರವವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕನ್ನಡ ಭಾಷೆ, ಬಾವುಟ ಹಾಗೂ ಕನ್ನಡಿಗರ ಆಶೋತ್ತರಗಳಿಗೆ ಗೌರವ ನೀಡುತ್ತದೆ ಎಂಬುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.


ಕರ್ನಾಟಕ ಜನರ ಮೇಲೆ ಬಲವಂತವಾಗಿ ಹಿಂದಿ ಭಾಷೆ ಹೇರುವ ಕೆಲಸ ನಡೆಯುತ್ತಿದೆ. ಒಂದು ಭಾಷೆಯನ್ನು ತುಳಿದು ಇನ್ನೊಂದು ಭಾಷೆಯನ್ನು ಹೇರುವುದರ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು.


ಭಾರತ ಬಹು ಸಂಸ್ಕೃತಿಯ ಒಕ್ಕೂಟ. ಹಾಗಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.


ಎಲ್ಲಾ ಭಾಷೆ, ಸಂಸ್ಕೃತಿಗೆ ಸಮಾನ ಅವಕಾಶ ಕೊಟ್ಟಾಗ ಮಾತ್ರ ಭಾರತದ ಐಕ್ಯತೆಯನ್ನು ಕಾಪಾಡಿದಂತಾಗುತ್ತದೆ. ಭಾರತ ಮತ್ತಷ್ಟು ಸುಭದ್ರವಾಗಿರಬೇಕಾದರೆ ಸರ್ವಯ ಶಾಂತಿಯ ತೋಟವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕನ್ನಡ ಸೇವೆ ಮಾಡಲು ಹಾಗೂ ಭಾಷೆಯನ್ನು ಬೆಳೆಸಲು ನಾವೆಲ್ಲರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಿ, ಅರ್ಥೈಸಿಕೊಳ್ಳಬೇಕು. ಈ ಕಾರ್ಯ ನಮ್ಮಿಂದಲೇ ಆರಂಭವಾಗಲಿ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.


ನಾಡಿನ ನೆಲ-ಜಲ ಸಂರಕ್ಷಣೆ, ಜನರಿಗೆ ಸುರಕ್ಷಿತ ವಾತಾವರಣ ಕಲ್ಪಿಸವುದು, ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದರು.


ಕನ್ನಡ ನಿತ್ಯೋತ್ಸವವಾಗಿ ಮೆರೆಯಬೇಕಾದರೆ ನಮ್ಮ ನಾಡಿನಲ್ಲಿ ನೆಲೆಸಿರುವ ಪ್ರತಿ ಪ್ರಜೆಗೂ ಕಾನೂನಿನ ರಕ್ಷಣೆ, ಸಾಮಾಜಿಕ ನ್ಯಾಯ ಮತ್ತು ನೆಮ್ಮದಿಯ ಬದುಕು ಸಿಗಬೇಕೆಂಬುದೇ ನಮ್ಮ ಸರ್ಕಾರದ ಸಂಕಲ್ಪ. ಈ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ನಾಡಿನ ಜನತೆಗೆ ರಕ್ಷೆಯಾಗಿ ನಿಂತಿದೆ ಎಂದು ಅವರು ತಿಳಿಸಿದರು.


೧೯೫೬ರಲ್ಲಿ ಕರ್ನಾಟಕ ಏಕೀಕರಣಗೊಂಡಿದ್ದರೂ ಹೆಸರು ಮಾತ್ರ ವಿಶಾಲ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. ಆದರೆ ಅಖಂಡ ಕನ್ನಡಿಗರ ಪ್ರಚಂಡ ಶಕ್ತಿಯನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ೧೯೭೩ರ ನವೆಂಬರ್ ೧ ರಂದು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣ ಮಾಡಿದರು. ಅಂದಿನಿಂದ ವಿಶಾಲ ಮೈಸೂರು ರಾಜ್ಯವು ಕರ್ನಾಟಕ ಎಂದು ಭಾರತ ಭೂಪಟದಲ್ಲಿ ರಾರಾಜಿಸುತ್ತಿದೆ ಎಂದು ಅವರು ಹೇಳಿದರು.


ಸ್ವಾತಂತ್ರ್ಯ ಹೋರಾಟ, ಕನ್ನಡ ಏಕೀಕರಣ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಕಲ್ಪತರುನಾಡು ತುಮಕೂರಿನ ಕೊಡುಗೆ ಅಪಾರವಾಗಿದೆ ಎಂದರು.


ಕಲ್ಪವೃಕ್ಷ ನಾಡಾಗಿರುವ ತುಮಕೂರು ರೈತರ ಬದುಕನ್ನು ಹಸನು ಮಾಡುದಷ್ಟೇ ಅಲ್ಲ, ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದು ಸ್ಮರಿಸಿದ ಅವರು, ವಿಶ್ವಕ್ಕೆ ಅಕ್ಷರ ದಾಸೋಹ, ಅನ್ನ ದಾಸೋಹ ಸೇರಿ ತ್ರಿವಿಧ ದಾಸೋಹವನ್ನು ನೀಡಿದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕಾಯಕ ಸೇವೆ ಪ್ರಪಂಚದಾದ್ಯಂತ ಜೀವಂತವಾಗಿದೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ತಂಡ, ಕರ್ನಾಟಕ ಮೀಸಲು ತಂಡ, ಗೃಹ ರಕ್ಷಕ ದಳ, ಮಹಿಳಾ ಪೊಲೀಸ್ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ತಂಡ, ವಿವಿಧ ಶಾಲೆಗಳ ಬಾಲಕ-ಬಾಲಕಿಯ ತಂಡಗಳು ಸೇರಿದಂತೆ ೨೦ಕ್ಕೂ ಅಧಿಕ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜ್ಯೋತಿಗಣೇಶ್ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತೆ ಶುಭ, ಅಡಿಷನಲ್ ಎಸ್ಪಿ ಸಿ. ಗೋಪಾಲ್, ಟೂಡಾ ಆಯುಕ್ತ ಉಮೇಶ್ಚಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಡಿಡಿಪಿಐ ರಘುಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.