
ಯಾದಗಿರಿ: ಮೇ.9:ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಪತ್ರಕರ್ತರ ಮಕ್ಕಳಿಗೆ ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೇ ಶೇ.50ರಷ್ಟು ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಪತ್ರಕರ್ತರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪತ್ರಕರ್ತರ ಮಕ್ಕಳಿಗೆ ಕನಿಷ್ಠ ಶೇ.50ರಷ್ಟು ಶುಲ್ಕ ವಿನಾಯಿತಿ ಕಲ್ಪಿಸುವ ಮೂಲಕ ಪತ್ರಕರ್ತರ ಕುಟುಂಬಗಳಿಗೆ ನೆರವಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಖಾಸಗಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಅನ್ವಯಿಸಬೇಕು ಎಂದು ಆಗ್ರಹಿಸಲಾಗಿದೆ.
ಸಂಘದ ಮುಖಂಡರು ಮಾತನಾಡಿ, ಜಿಲ್ಲೆಯ ಹಲವಾರು ಪತ್ರಕರ್ತರು ಆರ್ಥಿಕವಾಗಿ ಸಬಲರಾಗಿಲ್ಲ. ದಿನನಿತ್ಯ ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಕೆಲಸದಲ್ಲಿ ತೊಡಗಿರುವ ಪತ್ರಕರ್ತರು ತಮ್ಮ ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪತ್ರಕರ್ತರ ಸೇವೆಯನ್ನು ಗೌರವಿಸಿ ಶುಲ್ಕದಲ್ಲಿ ವಿನಾಯಿತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಇಲಾಖೆಯ ಅಧಿಕಾರಿಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಶಾಲಾ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪತ್ರಕರ್ತರ ಮಕ್ಕಳಿಗೆ ಶುಲ್ಕ ವಿನಾಯಿತಿ ದೊರೆತರೆ ಅನೇಕ ಕುಟುಂಬಗಳಿಗೆ ಆರ್ಥಿಕವಾಗಿ ದೊಡ್ಡ ನೆರವಾಗಲಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, “ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಆದರೆ ಬಹುತೇಕ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಸುಧಾರಿತವಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕವನ್ನು ಭರಿಸುವುದು ಹಲವರಿಗೆ ಕಷ್ಟಕರವಾಗಿದೆ. ಆದ್ದರಿಂದ ಪತ್ರಕರ್ತರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡುವ ಮೂಲಕ ಮಾನವೀಯತೆ ತೋರಬೇಕು” ಎಂದು ಹೇಳಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಜಿಲ್ಲಾ ಖಜಾಂಚಿ ರಾಜು ನಲ್ಲಿಕರ್, ಗಣೇಶ್ ಪಾಟೀಲ್, ಮಹೇಶ ಗಣೇರ್, ನಾಗರಾಜ ಕೋಟೆ, ನರಸಪ್ಪ ನಾರಾಯಣೋರ್, ಶರಭು ನಾಟೇಕರ್, ಲಕ್ಷ್ಮಿಕಾಂತ ಲಿಂಗೇರಿ, ಸುದೀರ್ ಕೋಟೆ, ಮಾನಯ್ಯ ಘಾಳೆಣ್ಣವರ, ನಾಗಪ್ಪ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಜಿಲ್ಲೆಯಲ್ಲಿ ಬಹುತೇಕ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡುವ ಮೂಲಕ ಖಾಸಗಿ ಶಾಲಾ ಮತ್ತು ಕಾಲೇಜುಗಳು ಮಾನವೀಯತೆ ಮೆರೆಯಬೇಕು. ಇದರಿಂದ ಪತ್ರಕರ್ತರ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.”
-ಮಲ್ಲಪ್ಪ ಸಂಕೀನ್, ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯಾದಗಿರಿ























