
ಮೈಸೂರು,ಅ.೧೭- ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಮೈಸೂರಿನ ಇಟ್ಟಿಗೆಗೂಡಿನ ಬಳಿ ೯ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಕಾರ್ತಿಕ್ಗೆ ನಗರದ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನಗರದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಪಿ. ಉಗಾಡೆ ಅವರು ಇಂದು ತೀರ್ಪು ಪ್ರಕಟಿಸಿ, ಅಪರಾಧಿಗೆ ಮರಣದಂಡನೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.
ಮೈಸೂರು ಹೊರವಲಯದ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ ಶಿಕ್ಷೆಗೊಳಗಾದ ಅಪರಾಧಿ. ೨೦೨೫ರ ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಬಾಲಕಿಯ ಕುಟುಂಬ ಕಲಬುರಗಿಯಿಂದ ಮೈಸೂರಿಗೆ ಬಂದಿತ್ತು. ಕುಟುಂಬವು ಇಟ್ಟಿಗೆಗೂಡಿನ ಬಳಿ ವಸ್ತುಪ್ರದರ್ಶನದ ಆವರಣದ ಮುಂಭಾಗದ ಮೈದಾನದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಿತ್ತು.
೨೦೨೫ರ ಅಕ್ಟೋಬರ್ ೮ರ ರಾತ್ರಿ ಕುಟುಂಬದ ಎಂಟು ಮಂದಿ ಶೆಡ್ನಲ್ಲಿ ಮಲಗಿದ್ದರು. ಈ ವೇಳೆ ಅವರೊಂದಿಗಿದ್ದ ೯ ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಬೆಳಗಿನ ಜಾವ ಶೆಡ್ ಪಕ್ಕದಲ್ಲೇ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ರಾತ್ರಿ ಯಾರೋ ತಮ್ಮ ಮಗಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ೨೪ ಗಂಟೆಗಳೊಳಗೆ ಕೊಳ್ಳೇಗಾಲದಲ್ಲಿ ಕಾರ್ತಿಕ್ನನ್ನು ಬಂಧಿಸಿದ್ದರು.
ಕೊಳ್ಳೇಗಾಲದಲ್ಲಿ ಬಂಧಿಸಿದ ಬಳಿಕ ಕಾರ್ತಿಕ್ನನ್ನು ಮೈಸೂರಿಗೆ ಕರೆತಂದು ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಆತನ ಗ್ರಾಮವಾದ ಸಿದ್ದಲಿಂಗಪುರಕ್ಕೆ ಕರೆದೊಯ್ದು ವಾಪಸ್ ಕರೆತರುತ್ತಿದ್ದಾಗ, ಮೇಟಗಳ್ಳಿ ಬಳಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದ್ದರು. ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರೂ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.
ಕಾರ್ತಿಕ್ ಖಾಸಗಿ ಬಸ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಕೊಳ್ಳೇಗಾಲಕ್ಕೆ ಸಂಚರಿಸುವ ಬಸ್ಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಆತ, ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಕಾರ್ತಿಕ್ ವಿರುದ್ಧ ಈ ಹಿಂದೆಯೂ ಎರಡು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದರು. ೨೦೨೩ರಲ್ಲಿ ಪಕ್ಕದ ಮನೆಯವರೊಂದಿಗೆ ಜಗಳವಾಡಿದ ಪ್ರಕರಣ ದಾಖಲಾಗಿತ್ತು. ೨೦೧೯ರಲ್ಲಿ ಕೊಳ್ಳೇಗಾಲದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆತನಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.
೯ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೋಕ್ಸೋ ನ್ಯಾಯಾಲಯ ಕಾರ್ತಿಕ್ಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದೆ.






















