Home ಜಿಲ್ಲೆ ಬೆಂಗಳೂರು ರೈತರ ಹಿತರಕ್ಷಣೆ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಡಿಸಿ ಆಗ್ರಹ

ರೈತರ ಹಿತರಕ್ಷಣೆ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಡಿಸಿ ಆಗ್ರಹ

ಕೋಲಾರ, ಮೇ,೬-ಜಿಲ್ಲೆಯಲ್ಲಿ ನೂತನವಾಗಿ ಪ್ರಸ್ತಾಪಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಪರ್ಕ ರಸ್ತೆ ಯೋಜನೆಗಳ ಅಂತಿಮ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ರೈತರ ಹಿತರಕ್ಷಣೆ ಹಾಗೂ ಸೇವಾ ರಸ್ತೆಗಳನ್ನು ಸಂಪರ್ಕ ಮಾಡಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ಅವರು ಆಗ್ರಹಿಸಿದರು.


ನಗರ ಹೊರವಲಯದ ಜಿಲ್ಲಾ ಆಡಳಿತ ಭವನದಲ್ಲಿನ ಕೇಸ್ವಾನ್ ಸಭಾಂಗಣದಲ್ಲಿ ಈ ಕುರಿತಾದ ಉನ್ನತ ಮಟ್ಟದ ಮಧ್ಯಸ್ಥಗಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ ಯೋಜನೆಗಳ ಅನುಷ್ಠಾನದ ವೇಳೆ ಪರಿಸರ ಸೂಕ್ಷ್ಮ ವಲಯಗಳ ಸಂರಕ್ಷಣೆ ಮತ್ತು ಕೃಷಿಕರ ಹಿತರಕ್ಷಣೆಗೆ ಸಭೆಯಲ್ಲಿ ಮೊದಲ ಆದ್ಯತೆ ನೀಡಲು ಸೂಚಿಸಿದರು.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಭಾರಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಪ್ರಸ್ತಾಪಿಸಲಾಗಿರುವ ಕುಪ್ಪಂ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಹಿಂದೆ ಯೋಜಿಸಲಾಗಿದ್ದ ಮಾರ್ಗವು ಕಾಮಸಮುದ್ರಂ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದು ಹೋಗುತ್ತಿತ್ತು. ಇದರಿಂದಾಗಿ ಉಂಟಾಗಬಹುದಾದ ಕಾನೂನು ತೊಡಕುಗಳು ಹಾಗೂ ಅರಣ್ಯ ನಾಶವನ್ನು ತಪ್ಪಿಸಲು ಸಭೆಯಲ್ಲಿ ನೂತನ ನಕ್ಷೆಗಳನ್ನು ಪರಿಶೀಲಿಸಲಾಯಿತು.


ವನ್ಯಜೀವಿ ಧಾಮದ ಪ್ರಮುಖ ವಲಯಕ್ಕೆ ಧಕ್ಕೆಯಾಗದಂತೆ, ಪರಿಸರ ಸೂಕ್ಷ್ಮ ವಲಯದಿಂದ ಸಂಪೂರ್ಣ ಹೊರಗುಳಿಯುವ ಬಂಗಾರಪೇಟೆ ಕಡೆಯ ’ಆಯ್ಕೆ-೧’ ಮಾರ್ಗವೇ ಅತ್ಯಂತ ಸೂಕ್ತ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು. ಆದರೆ, ಈ ಮಾರ್ಗದಲ್ಲಿ ಬರುವ ನೀರಾವರಿ ಹೊಂಡಗಳ ಸಂರಕ್ಷಣೆಗಾಗಿ ಸಣ್ಣ ನೀರಾವರಿ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಸೂಕ್ಷ್ಮ ಮಾರ್ಪಾಡುಗಳನ್ನು ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಯಿತು.


೬-ಪಥದ ಹೆದ್ದಾರಿ ನಿರ್ಮಾಣದಿಂದ ಗ್ರಾಮಗಳ ಹಾಗೂ ರೈತರ ಕೃಷಿ ಭೂಮಿಗಳು ವಿಭಜನೆಗೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಹೆದ್ದಾರಿಯ ಇಕ್ಕೆಲಗಳಲ್ಲಿ ಕಡ್ಡಾಯವಾಗಿ ಕನಿಷ್ಠ ೭ ಮೀಟರ್ ಅಗಲದ ಸರ್ವಿಸ್ ರಸ್ತೆಗಳನ್ನು ನಿರ್ಮಿಸಬೇಕು ಎಂದು ಖಡಕ್ ನಿರ್ದೇಶನ ನೀಡಿದರು. “ರೈತರಿಗೆ ತಮ್ಮದೇ ಜಮೀನುಗಳಿಗೆ ಹೋಗಲು ಮುಕ್ತ ಪ್ರವೇಶ ನಿರಾಕರಿಸುವುದು ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಹಿಂದಿನ ಯೋಜನೆಗಳಲ್ಲಿ ಸರ್ವಿಸ್ ರಸ್ತೆಗಳ ಕೊರತೆಯಿಂದಾಗಿ ಎದುರಾಗಿರುವ ನ್ಯಾಯಾಲಯದ ಪ್ರಕರಣಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಹೆದ್ದಾರಿಯ ಒಟ್ಟು ಅಗಲವನ್ನು ೬೦ ಮೀಟರ್‌ಗಳಿಗೆ ನಿಗದಿಪಡಿಸಿ, ಸರ್ವಿಸ್ ರಸ್ತೆಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಓಊಂI ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.


ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹಾಗೂ ಕುಪ್ಪಂ ಕಾರಿಡಾರ್ ನಡುವೆ ಸಂಪರ್ಕ ಕಲ್ಪಿಸುವ ೨೦ ಕಿ.ಮೀ ಉದ್ದದ ಲಿಂಕ್ ರಸ್ತೆ ಯೋಜನೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ರಸ್ತೆಯು ಕೆ.ಜಿ.ಎಫ್‌ನ ನೂತನ ಕೈಗಾರಿಕಾ ಪ್ರದೇಶದ ಮೂಲಕ ಹಾದುಹೋಗಲಿದ್ದು, ಈ ವಲಯದ ಸವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನಿಗೆ ಯಾವುದೇ ತೊಂದರೆಯಾಗದಂತೆ ಹೆದ್ದಾರಿ ನಕ್ಷೆಯನ್ನು ರೂಪಿಸಲು ತೀರ್ಮಾನಿಸಲಾಗಿದ್ದು, ಮುಂದಿನ ಸಭೆಗೆ ಏIಂಆಃ ಅಧಿಕಾರಿಗಳನ್ನು ಕಡ್ಡಾಯವಾಗಿ ಆಹ್ವಾನಿಸಲು ನಿರ್ಧರಿಸಲಾಯಿತು.


ಸಭೆಗೆ ಗೈರುಹಾಜರಾಗಿದ್ದ ಮತ್ತು ಹೆದ್ದಾರಿ ಯೋಜನೆಗೆ ಪೂರಕ ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಕೆಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಸಣ್ಣ ನೀರಾವರಿ ಇಲಾಖೆಗಳು ತಕ್ಷಣವೇ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆ, ಜಮೀನಿನ ವಿವರಗಳು ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಅಗತ್ಯವಿರುವ ವರದಿಗಳನ್ನು ನೀಡಬೇಕು ಎಂದು ಗಡುವು ವಿಧಿಸಿದರು.


ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆ ಜಿ ಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಮಾಲೂರು ತಹಸೀಲ್ದಾರ್ ರೂಪ, ಬಂಗಾರಪೇಟೆ ತಹಸೀಲ್ದಾರ್ ಸುಜಾತಾ ಹಾಗೂ ಎನ್ ಹೆಚ್ ಎ ಐ ನ ಯೋಜನಾ ಇಂಜಿನಿಯರ್‌ಗಳು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.