Home ಜಿಲ್ಲೆ ಕಲಬುರಗಿ ಸಿಯುಕೆ: ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತು ಪ್ರಮಾಣಪತ್ರ ಕೋರ್ಸ್ ಆರಂಭ

ಸಿಯುಕೆ: ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತು ಪ್ರಮಾಣಪತ್ರ ಕೋರ್ಸ್ ಆರಂಭ

ಕಲಬುರಗಿ.ಸೆ.17: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ‘ಕಲಿಕೆ ಟಾಟಾ ಟ್ರಸ್ಟ್ಸ್’ ಸಹಯೋಗದೊಂದಿಗೆ ‘ಮಕ್ಕಳ ಸ್ನೇಹಿ ಗ್ರಂಥಾಲಯಗಳ ನಿರ್ಮಾಣ ಮತ್ತು ನಿರ್ವಹಣೆ’ ಕುರಿತ ಹೊಸ ಪ್ರಮಾಣಪತ್ರ ಕೋರ್ಸ್ ಇಂದು ಆರಂಭಿಸಿತು. ಈ ಸಂದರ್ಭದಲ್ಲಿ ವಿ.ವಿ.ಯ ಶಿಕ್ಷಣ ಮತ್ತು ತರಬೇತಿ ವಿಭಾಗದಲ್ಲಿ ಮಾದರಿ ‘ಎಜುನೆಸ್ಟ್ ಲೈಬ್ರರಿ’ಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಸಿಯುಕೆ ಮತ್ತು ‘ಕಲಿಕೆ ಟಾಟಾ ಟ್ರಸ್ಟ್ಸ್’ ನಡುವಿನ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ ರೂಪಿಸಲಾದ ಈ ಪ್ರಮಾಣಪತ್ರ ಕೋರ್ಸ್, ಕರ್ನಾಟಕದಾದ್ಯಂತ ಇರುವ ಸುಮಾರು 5623 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಾಹಕರ ವೃತ್ತಿಪರ ಸಾಮಥ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಈ ಪ್ರಮಾಣಪತ್ರ ಕೋರ್ಸ್‍ನಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಮಕ್ಕಳ ಸಾಹಿತ್ಯದ ಪರಿಚಯ, ಸೃಜನಶೀಲ ಓದುವ ಚಟುವಟಿಕೆಗಳ ಆಯೋಜನೆ, ಸಮುದಾಯದ ಓದುವ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
ಮಕ್ಕಳು ಮತ್ತು ಯುವ ಕಲಿಯುವವರಲ್ಲಿ ಓದುವಿಕೆ, ಸೃಜನಶೀಲತೆ, ಅನ್ವೇಷಣೆ ಹಾಗೂ ಜ್ಞಾನ ಸೃಷ್ಟಿಯನ್ನು ಉತ್ತೇಜಿಸುವ ಮಕ್ಕಳ ಸ್ನೇಹಿ ಮತ್ತು ಕಲಿಕಾ-ಆಧಾರಿತ ಸ್ಥಳವಾಗಿ ‘ಎಡುನೆಸ್ಟ್ ಲೈಬ್ರರಿ’ಯನ್ನು ರೂಪಿಸಲಾಗಿದೆ ಎಂದು ಪೆÇ್ರ. ಬಟ್ಟು ಸತ್ಯನಾರಾಯಣ ತಿಳಿಸಿದರು. ಸಮುದಾಯ ಗ್ರಂಥಾಲಯಗಳನ್ನು ಚೈತನ್ಯಶೀಲ, ಆಕರ್ಷಕ ಹಾಗೂ ಕಲಿಕೆಗೆ ಪೂರಕವಾದ ಸ್ಥಳಗಳನ್ನಾಗಿ ಪರಿವರ್ತಿಸುವ ಸಾಮಥ್ರ್ಯ ಹೊಂದಿರುವ ಈ ಕ್ರಮವನ್ನು ಅವರು ಶ್ಲಾಘಿಸಿದರು.
ಮಗು-ಕೇಂದ್ರಿತ ಹಾಗೂ ಸಮುದಾಯ-ಆಧಾರಿತ ಗ್ರಂಥಾಲಯ ಪದ್ಧತಿಗಳಿಗೆ ಒತ್ತು ನೀಡುವಂತೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಅನುಗುಣವಾಗಿ ಈ ಪ್ರಮಾಣಪತ್ರ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಾಮಾಣಿಕತೆ, ಶಿಸ್ತು ಹಾಗೂ ಕಠಿಣ ಪರಿಶ್ರಮದ ಮಹತ್ವವನ್ನು ಒತ್ತಿಹೇಳಿದರು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಯಶಸ್ಸಿಗಾಗಿ ಅಡ್ಡದಾರಿಗಳನ್ನು ಹುಡುಕದೆ, ಪರಿಶ್ರಮ ಮತ್ತು ಶಿಸ್ತಿನೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಡಾ. ಸುರೇಶ್ ಅನುಗಂಟಿ ಅವರು “ರೀಲ್ಸ್ ಸ್ಕ್ರೋಲ್ ಮಾಡುವುದೋ, ಪುಸ್ತಕದ ಪುಟಗಳನ್ನು ತಿರುಗಿಸುವುದೋ: ನಾವೇನು ಕಳೆದುಕೊಳ್ಳುತ್ತಿದ್ದೇವೆ? ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಯುವಜನರ ಬದಲಾಗುತ್ತಿರುವ ಓದುವ ಹವ್ಯಾಸಗಳು, ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಅರ್ಥಪೂರ್ಣ ಓದುವಿಕೆಯನ್ನು ಉತ್ತೇಜಿಸುವ ಅಗತ್ಯದ ಕುರಿತು ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರು ಹಾಗೂ ಡೀನ್ ಪೆÇ್ರ. ಜಿ. ಆರ್. ಅಂಗಡಿ, ‘ಕಲಿಕೆ’ಯ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಶಿವಕುಮಾರ್, ‘ಕಲಿಕೆ ಟಾಟಾ ಟ್ರಸ್ಟ್ಸ್’ನ ಶಿವಕುಮಾರ್ ಯಾದವ್, ಕೋಟ್ರೇಶ್ ಶಿಕ್ಷಣ ಮತ್ತು ತರಬೇತಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ತ್ಯಾಗು, ಡಾ. ಆಶಾಲತಾ ಎಸ್., ಡಾ. ಪಿ. ಬಿ. ಬಾಗೇವಾಡಿ, ಡಾ. ಸುರೇಶ್ ಅನುಗಂಟಿ, ಡಾ. ಎಂ. ಶ್ರೀದೇವಿ, ಡಾ. ಅಖಿಲೇಶ್ ಮಿಶ್ರಾ, ಡಾ. ಮಂಡಲ ಚಂದ್ರಶೇಖರ್ ಗೌಡ್, ಡಾ. ನಿಶಾ ಪ್ರಜಾಪತಿ ಹಾಗೂ ಡಾ. ಬುಚಿ ರೆಡ್ಡಿ ಪೆÇರೆಡ್ಡಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ‘ವಂದೇ ಮಾತರಂ’ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದ ಸಂಯೋಜಕರಾದ ಡಾ. ಮಯೂರ್ ಪೂಜಾರಿ ಅವರು ವಂದನಾರ್ಪಣೆ ಸಲ್ಲಿಸಿದರು.