
ಬೀದರ್, ಮೇ 10: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳ ಅನುಯಾಯಿಗಳಾಗಿರುವ ನವ ಜೋಡಿ ಸಿದ್ಧಾರ್ಥ ಮತ್ತು ಸಂಜೀವನಿ ಅವರು ತಮ್ಮ ವಿವಾಹ ದಿನದಂದು ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಜ್ಞೆ ಸ್ವೀಕರಿಸಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬೀದರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಧು-ವರರು ಅಂಬೇಡ್ಕರ್ ಪ್ರತಿಮೆಯ ಸನ್ನಿಧಿಯಲ್ಲಿ ವಿವಾಹ ಪ್ರತಿಜ್ಞೆ ಕೈಗೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಡಾ. ಅಂಬೇಡ್ಕರ್ ಅವರ ಜೀವನ, ನೀತಿ ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ದಾಂಪತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಈ ಜೋಡಿ ಬೌದ್ಧ ಧರ್ಮದ ರೀತಿ-ನೀತಿಗಳ ಪ್ರಕಾರ ಪ್ರಾರ್ಥನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಮ್ಸ್ ವೈದ್ಯರು ಹಾಗೂ ಪೆÇ್ರ. ಡಾ. ರಾಜ್‍ಕುಮಾರ್ ಬನ್ನೆರ, “ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಬದುಕಲು ಬಯಸಿದ ಈ ಜೋಡಿ, ವಿವಾಹವನ್ನು ಅಂಬೇಡ್ಕರ್ ಪ್ರತಿಮೆಯ ಪವಿತ್ರ ಸನ್ನಿಧಿಯಲ್ಲಿ ಆಚರಿಸಲು ನಿರ್ಧರಿಸಿತು. ಇದು ಯುವ ಪೀಳಿಗೆಗೆ ಮಾದರಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಬಂಧಿಕರಾದ ಸುರೇಶ್ ಶಿಂಧೆ, ಶ್ರೇಯಾ ಬ್ಯಾನರ್, ವಿಹಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಧು ಸಂಜೀವನಿ ಕೆಂಪು-ಬಿಳಿ ಸೀರೆಯಲ್ಲಿ ಮತ್ತು ವರ ಸಿದ್ಧಾರ್ಥ ಪಂಚೆ-ಶಲ್ಯದಲ್ಲಿ ಕೈಮುಗಿದು ನಿಂತು ಪ್ರತಿಜ್ಞೆ ಸ್ವೀಕರಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.























