Home ಜಿಲ್ಲೆ ತುಮಕೂರು ತುಮಕೂರು ದಸರಾ ಉದ್ಘಾಟನೆಗೆ ಕ್ಷಣಗಣನೆ

ತುಮಕೂರು ದಸರಾ ಉದ್ಘಾಟನೆಗೆ ಕ್ಷಣಗಣನೆ

ತುಮಕೂರು, ಅ. ೧೦- ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಳೆದ ೨ ವರ್ಷದಿಂದ ತುಮಕೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ೩ನೇ ವರ್ಷವಾದ ಈ ಬಾರಿಯೂ ಬರದ ನಡುವೆಯೂ ವೈಭವದ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ತುಮಕೂರು ದಸರಾವನ್ನು ವೈಭವೋಪೇತವಾಗಿ ಆಚರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಜಿಲ್ಲೆಯ ಜನರು ದಸರಾ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತಿ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ ಶಾಸ್ತ್ರೋಕ್ತವಾಗಿ ಹೋಮ-ಹವನಗಳನ್ನು ನಡೆಸಲು ಭವ್ಯವಾದ ಧಾರ್ಮಿಕ ಮಂಟಪಗಳನ್ನು ಸಜ್ಜುಗೊಳಿಸಲಾಗಿದೆ. ಜತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲು ಭವ್ಯ ವೇದಿಕೆ ಮೈದಳೆದು ನಿಂತಿದೆ.

ತುಮಕೂರು ದಸರಾ ಆಚರಣೆ ಹಿನ್ನೆಲೆಯಲ್ಲಿ ಇಡೀ ನಗರದ ವಿದ್ಯುತ್ ದೀಪಾಲಂಕರದಿಂದ ಝಗಮಗಿಸುತ್ತಿದ್ದು, ಹಲವು ವೈಶಿಷ್ಟ್ಯಗಳನ್ನೊಳಗೊಂಡಂತೆ ಜಿಲ್ಲೆಯ ಜನರಿಗೆ ದಸರಾ ಹಬ್ಬದ ಸಂಭ್ರಮವನ್ನು ಉಣಬಡಿಸಲು ಸರ್ವರೀತಿಯಲ್ಲೂ ಜಿಲ್ಲಾಡಳಿತ ಸನ್ನದ್ಧವಾಗಿದೆ.

ದಸರಾದಲ್ಲಿ ಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹೆಲಿಕಾಪ್ಟರ್ ಪ್ರವಾಸ (ಹೆಲಿ ರೈಡ್), ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ಫಲಫುಷ್ಪ ಪ್ರದರ್ಶನ, ಕಾರುಗಳ ಪ್ರದರ್ಶನ, ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ದೀಪಾಲಂಕಾರ, ಬಾಣ-ಬಿರುಸುಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಲಿವೆ.
ಮಹಿಳಾ ಮತ್ತು ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ ಹಾಗೂ ದಸರಾ ಕ್ರೀಡೆಯಲ್ಲಿ ನಾಡಕುಸ್ತಿ, ಕಬಡ್ಡಿ, ವಾಲಿಬಾಲ್, ಶೂಟಿಂಗ್, ಟೆನ್ನಿಸ್, ಜಿಮ್ನಾಸ್ಟಿಕ್, ಚೆಸ್ ಇತರೆ ಪಂದ್ಯಗಳು ನಡೆಯಲಿವೆ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ವಿಶೇಷ ದೀಪಾಲಂಕಾರವನ್ನು ನಗರದ ಜನತೆ ವೀಕ್ಷಿಸಲು ಈ ಬಾರಿ ೨ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ದಸರಾ ಅಂಗವಾಗಿ ಅಮಾನಿಕೆರೆಯಲ್ಲಿ ತುಮಕೂರು ಕಾರಂಜಿ ಹಾಗೂ ಎಸ್.ಎಸ್. ವೃತ್ತದಲ್ಲಿ ತುಮಕೂರು ಸ್ಕ್ವೇರ್ ಉದ್ಘಾಟನೆಯೂ ಸಹ ನಡೆಯಲಿದೆ. ಅ. ೨೧ ವಿಜಯದಶಮಿಯಂದು ಸುತ್ತಮುತ್ತಲಿನ ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ, ಜಂಬೂ ಸವಾರಿ ಜರುಗಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ೩ ಆನೆಗಳು ಜನರ ಪ್ರಮುಖ ಆಕರ್ಷಣೆಯಾಗಲಿವೆ.