Home ಜಿಲ್ಲೆ ಶುದ್ಧೀಕರಣ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಆಗ್ರಹ

ಶುದ್ಧೀಕರಣ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಆಗ್ರಹ

ಯಾದಗಿರಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಿರುವ ಉತ್ತರಾಖಂಡ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಕಳೆದ ಆಗಸ್ಟ್ ೮ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಮನುವಾದಿ ಮನಸ್ಥಿತಿಯವರು ಶುದ್ಧೀಕರಣ ಮಾಡಿರುವುದು ಖಂಡನೀಯ ಎಂದರು.

ಘಟನೆಯನ್ನು ತೀವ್ರವಾಗಿ ವಿರೋಧಿಸಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದು ಹಲವು ದಶಕಗಳು ಕಳೆದರೂ ಜಾತಿ ವ್ಯವಸ್ಥೆಯ ಮನಸ್ಥಿತಿ ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಶಾಸಕ ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ಘಟನೆಯನ್ನು ದೇಶದ ಪ್ರಜ್ಞಾವಂತ ನಾಗರಿಕರು ಖಂಡಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರಪ್ಪ ಬಿಳ್ಳಾರ ಮಾತನಾಡಿ, ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಯುಡಾ ಅಧ್ಯಕ್ಷ ಬಾಬುರಾವ್ ಕಾಣ್ಣೂರ, ಪಕ್ಷದ ಮುಖಂಡರಾದ ಆದರ್ಶ ಯಲ್ಲಪ್ಪ, ಪರಶುರಾಮ ಚವ್ಹಾಣ, ಶಿವಕುಮಾರ ಹುಲಕಲ್, ನಾಗಣಗೌಡ ಹಳಿಗೇರಾ, ಶಿವರಾಜ ಬಾವೂರ, ಬಾಬುಗೌಡ ಮಾಚನೂರ, ಸುರೇಶಗೌಡ, ಶರಣು ಪಡಶೆಟ್ಟಿ, ಸುರೇಶ ಮಡ್ಡಿ, ಸಾಬಣ್ಣ ಕೆಂಗೂರಿ, ರಾಜಮೈನುದ್ದೀನ್ ಮಿರ್ಚಿ, ಶಿವು ಕೊಲಿವಾಡ, ಮಹೇಶ ಕೊಲೂರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.