
ಬೀದರ, ಜೂ 5: ಪರಿಸರವನ್ನು ಹಸಿರಾಗಿಸುವ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಮಾಲಿನ್ಯ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಬೇಕು ಎಂದು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಗನ್ನಾಥ ಹೆಬ್ಬಾಳೆ ಹೇಳಿದರು.
ನಗರದ ಬರೀದ್ ಶಾಹಿ ಉದ್ಯಾನವನದಲ್ಲಿ ಹಿರಿಯ ಯೋಗ ಸಾಧಕರ ತಂಡದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಮಾಜದಲ್ಲಿ ಸ್ವಚ್ಛತಾ ಸಂಸ್ಕøತಿಯನ್ನು ಬೆಳೆಸಬಹುದಾಗಿದೆ ಎಂದರು. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ-ಕಡ್ಡಿ ಬಿಸಾಡದೆ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್, ಪರಿಸರ ಜಾಗೃತಿ ಮತ್ತು ಮಾಲಿನ್ಯ ನಿಯಂತ್ರಣದ ಕಾರ್ಯಗಳು ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಸರ್ಕಾರಗಳು ಹಸಿರೀಕರಣ ಮತ್ತು ಸ್ವಚ್ಛತಾ ಅಭಿಯಾನಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಜನರು ಪ್ರಾಮಾಣಿಕವಾಗಿ ಸಹಕರಿಸಿದಾಗ ಮಾತ್ರ ಅವು ಯಶಸ್ವಿಯಾಗಲಿವೆ ಎಂದು ಅಭಿಪ್ರಾಯಪಟ್ಟರು. ಪ್ರಸಕ್ತ ಮಳೆಗಾಲದಲ್ಲಿ ನಡೆಯುತ್ತಿರುವ “ಮನೆ ಮನೆಗಳಲ್ಲಿ ಸಸ್ಯಾರೋಪಣ” ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಂಕರ್ ಕೆ. ಮಾತನಾಡಿ, ಕಾಲೇಜಿನಲ್ಲಿ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇತ್ತೀಚೆಗೆ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ 300 ಸಸಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜಕುಮಾರ ಅಲ್ಲುರೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜು ಆವರಣದ ಹಸಿರೀಕರಣಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಸಿಗಳಿಗೆ ಪೂಜೆ ಸಲ್ಲಿಸಿ, ಆಲಂಕಾರಿಕ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು.
ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಜು ಶೀಲವಂತ ಸ್ವಾಗತ ಗೀತೆ ಹಾಡಿದರು. ಅಶೋಕ ಶೀಲವಂತ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ನಿವೃತ್ತ ಮುಖ್ಯಗುರು ನಿಜಲಿಂಗಪ್ಪ ತಗಾರೆಯವರು ವಂದಿಸಿದರು. ಜ್ಞಾನೇಶ ಪಾಟೀಲ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ರಮೇಶ ಕಪ್ಲಾಪುರ, ಶಿವರಾಜ ಬಿರಾದಾರ, ಶಂಕರ ಚಿದ್ರಿ, ಈಶ್ವರ ಕನ್ನೇರಿ, ರಾಚಯ್ಯ ಸ್ವಾಮಿ, ಪುಷ್ಪವತಿ, ಅರುಣಾ ಪಾಟೀಲ, ನೀಲಮ್ಮ ರೋಗನ ಸೇರಿದಂತೆ ಉದ್ಯಾನದ ಅನೇಕ ಯೋಗ ಸಾಧಕರು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.

























