
ಜಮಖಂಡಿ:ಏ.12: ಸಹಜ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ಮತ್ತು ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್ಸೆಸ್ ಸುವರ್ಣಖಂಡಿ ಹೇಳಿದರು.
ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿರುವ ರೋಟರಿ ಭವನದಲ್ಲಿ ಶುಕ್ರವಾರ ಸಂಜೆ ಸ್ಥಳೀಯ ರೋಟರಿ ಸಂಘ ಆಯೋಜಿಸಿದ್ದ ವಾರದ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
“ಮಾನವ ಜೀವನದಲ್ಲಿ ಸರಳತೆ ಅಳವಡಿಸಿಕೊಂಡರೆ ಮಾತ್ರ ಪರಿಸರವನ್ನು ಕಾಪಾಡಲು ಸಾಧ್ಯ. ಅನಗತ್ಯವಾಗಿ ಸಂಪನ್ಮೂಲಗಳನ್ನು ದುರುಪಯೋಗ ಮಾಡದೇ, ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಅವರು ಹೇಳಿದರು.
ಇದೇ ವೇಳೆ ಪ್ರಾಣಿಜನ್ಯ ವಸ್ತುಗಳ ಅತಿಯಾದ ಬಳಕೆ ತಪ್ಪಿಸುವುದು, ಮರಗಳನ್ನು ನೆಟ್ಟು ಬೆಳೆಸುವುದು, ಆಹಾರ, ನೀರು ಹಾಗೂ ಮಣ್ಣು ಮಾಲಿನ್ಯವಾಗದಂತೆ ಜಾಗೃತಿಯಿಂದ ನಡೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ರೋಟರಿ ಸಂಘದ ಕಾರ್ಯಕ್ರಮಗಳ ಕುರಿತು ಶ್ರೀಧರ ಕಾಕಂಡಕಿ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ರಾಜಶೇಖರ ಕೋವಳ್ಳಿ ಸ್ವಾಗತಿಸಿದರು. ಸಂತೋಷ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಮಹಾದೇವ ಕಂಕಾಳೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ ವಂದಿಸಿದರು.






















