
ಜೇವರಗಿ,ಏ 17: ಪೌರಕಾರ್ಮಿಕರ ಬಾಕಿ ವೇತನ ಹಾಗೂ ನೇಮಕಾತಿ ಸಮಸ್ಯೆ ಹಿನ್ನೆಲೆಯಲ್ಲಿ ಜೇವರಗಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ತೀವ್ರಗೊಂಡಿದ್ದು, ಕಾರ್ಮಿಕ ಸಂಘಟನೆ ಮುಖಂಡರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೇವರ್ಗಿ ಪುರಸಭೆ ಪೌರಕಾರ್ಮಿಕರ ಸಂಘಟನೆಯ ಮುಖಂಡ ಮಹೇಶ್ ಕುಮಾರ್ ರಾಥೋಡ್ ಮಾತನಾಡಿ, ಇಲ್ಲಿನ ಶಾಸಕರು ಪೌರಕಾರ್ಮಿಕರು ಹಾಗೂ ದುಡಿಯುವ ವರ್ಗದ ಪರ ನಿಜವಾದ ಬದ್ಧತೆ ಹೊಂದಿದ್ದರೆ, ತಕ್ಷಣ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಕಾಳಜಿಯನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷೆ ಶಂಕರಮ್ಮ, ಕಾರ್ಯದರ್ಶಿ ರಾಘವೇಂದ್ರ, ಅಖಿಲ ಮಹಮ್ಮದ್ ಚೌದ್ರಿ ಕೊಡ್ಚಿ, ಮಲ್ಲಿಕಾರ್ಜುನ ಕೆಲ್ಲೂರ್, ರಾಜ ಪಟೇಲ್ ಯಳ್ವಾರ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಜೊತೆಗೆ ಪೌರಕಾರ್ಮಿಕರಾದ ಗಂಗಮ್ಮ, ಶರಣಮ್ಮ, ದೊಡ್ಡಮ್ಮ, ದೇವಕಿ, ಶಾರದಬಾಯಿ ಸೇರಿದಂತೆ ಅನೇಕರು ನಿರಂತರ ಧರಣಿಯಲ್ಲಿ ಭಾಗಿಯಾಗಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತಿದ್ದಾರೆ.




















