
ಕೋಲಾರ,ಮೇ,೧೧- ತಾಲ್ಲೂಕಿನ ಚಿಟ್ನಹಳ್ಳಿಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಕಳೆದ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಕಳೆದ ಐದು ವರ್ಷಗಳಿಂದ ಆರಂಭಿಸಿರುವ ಕರಗಮಹೋತ್ಸವದಲ್ಲಿ ಕರಗದ ಪೂಜಾರಿ ಕಾಕಿನತ್ತ ಬಾಲರಾಜ್ ಐದನೇ ಬಾರಿ ದೇವಾಲಯದ ಮುಂಭಾಗದ ಆವರಣದಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ಸೇರಿದ್ದ ಬೃಹತ್ ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು.
ವೀರ ಕುಮಾರರ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ಕರಗ ನೃತ್ಯಕ್ಕೆ ಜನರ ಶಿಳ್ಳೆ ಮತ್ತು ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು.
ಕರಗದ ಪೂಜಾರಿ ಬಾಲರಾಜು ತಮ್ಮ ಅನುಭವವನ್ನು ಕೃತಿಗಿಳಿಸಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ್ದ ಇಡೀ ಕಾರಂಜಿಕಟ್ಟೆ ಬಡಾವಣೆ ಅವಿಸ್ಮರಣೀಯ ಅನುಭವದಲ್ಲಿ ಮುಳುಗಿ ಹೋಯಿತು.
ಚಿಟ್ನಹಳ್ಳಿ ಗ್ರಾಮದ ತಿಗಳ ಜನಾಂಗ ಕರಗವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ಇವರು ಮಾತ್ರವಲ್ಲದೇ ಸಮಾಜದ ಅನೇಕ ಮಂದಿ ಕರಗಕ್ಕೆ ಪೂಜೆ ಸಲ್ಲಿಸಿ ನಮಿಸಿ ಭಕ್ತಿ ಪ್ರದರ್ಶಿಸಿದರು.
ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರರು ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು. ಇದಾದ ನಂತರ ಶನಿವಾರ ಮಧ್ಯಾಹ್ನ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಅಷ್ಟಮೂರ್ತಮ್ಮ, ದ್ರೌಪದಮ್ಮ, ಧರ್ಮರಾಯಸ್ವಾಮಿ, ವೇಣುಗೋಪಾಲಸ್ವಾಮಿ, ಆಂಜನೇಯಸ್ವಾಮಿ, ರೇಣುಕಾಯಲ್ಲಮ್ಮ ದೇವರುಗಳ ಪುಷ್ಪಪಲ್ಲಕ್ಕಿ ಉತ್ಸವವೂ ನಡೆಯಿತು. ಭಾರತ ಪಠಣವನ್ನು ಪೂಜಾರಿ ವೇಮಗಲ್ ನಾರಾಯಣಸ್ವಾಮಿ ನಡೆಸಿಕೊಟ್ಟರು.
ಕರಗ ಮಹೋತ್ಸವದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮಟ್ನಹಳ್ಳಿ ಎಳ್ಳೇಗೌಡ, ಭೇಟಿ ನೀಡಿದ್ದು, ಗ್ರಾಮದ ಗೌಡ ಸಿ.ಎಂ.ನಾಗರಾಜ್, ಸಿ.ಚಂದ್ರು, ಸಿ.ಎನ್.ಮುನಿಯಪ್ಪ, ಸಿ.ಎನ್.ಸುಬ್ರಮಣಿ, ಚೌಡರೆಡ್ಡಿ, ಸಿ.ಎನ್.ಮುನಿವೆಂಕಟರೆಡ್ಡಿ, ಆಂಜಿನಪ್ಪ, ಸಿ.ಇ.ನಾರಾಯಣಸ್ವಾಮಿ, ಯಜಮಾನ್ ಮುರುಗೇಶ್, ಕೃಷ್ಣಪ್ಪ, ಚಂದ್ರು, ಮಂಜುನಾಥ್, ನಾರಾಯಣಸ್ವಾಮಿ, ಕೋಲ್ಕಾರ್‌ಬಾಬು, ಸಿ.ವಿ.ಸೋಮೇಶ್, ಸುರೇಶ್, ರಾಮಚಂದ್ರ, ರಾಧಾಕೃಷ್ಣ, ಸಿ.ವಿ.ಸೋಮೇಶ್, ಪುರುಷೋತ್ತಮ್ ಮತ್ತಿತರರಿದ್ದರು.


























