
ಸಂಜೆ ವಾಣಿ ವಾರ್ತೆ
ಜಮಖಂಡಿ | ಮೇ ೧೬:ನಗರದ ಅಪ್ಪಾಸಾಹೇಬ ವಿಠ್ಠಲ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗ ವಾಹಿನಿ ಜಮಖಂಡಿ ಪ್ರಖಂಡ ಸಹಯೋಗದಲ್ಲಿ ಆಯೋಜಿಸಿದ್ದ “ಧರ್ಮ ಬೋಧನೆ ಮತ್ತು ಶ್ಲೋಕ ಕಲಿಕಾ ಶಿಬಿರ-೨೦೨೬”ರ ಸಮಾರೋಪ ಸಮಾರಂಭ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುತ್ತಿನಕಂತಿ ಹಿರೇಮಠದ ಶ್ರೀ ಶಿವಲಿಂಗ ಪಂಡಿತ್ತಾರಾಧ್ಯ ಶಿವಾಚಾರ್ಯ ಶ್ರೀಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಮೇಶ್ ಸಿಧ್ರಡ್ಡಿ, ಆನಂದ ಕದಂ, ಅಜಯ ಕುಲಕರ್ಣಿ, ತೃಪ್ತಿ ಬಟಕುರ್ಕಿ ಹಾಗೂ ಸ್ನೇಹಾ ಸೂರ್ಯವಂಶಿ ಉಪಸ್ಥಿತರಿದ್ದರು.
ವೇದಿಕೆ ಮೇಲಿನ ಗಣ್ಯರು ಭಾರತ ಮಾತೆ ಹಾಗೂ ಭಗವಾನ್ ಶ್ರೀರಾಮರ ಭಾವಚಿತ್ರಕ್ಕೆ ಪೂಜಾ ಕೈಂಕರ್ಯ ನೆರವೇರಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಉಮೇಶ್ ಸಿಧ್ರಡ್ಡಿ, ಶ್ಲೋಕ ಪಠಣ ಮತ್ತು ಸಂಸ್ಕಾರ ಶಿಕ್ಷಣವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಇಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಹಾಗೂ ಭಗವದ್ಗೀತೆಯ ಮೌಲ್ಯಗಳನ್ನು ಪರಿಚಯಿಸುವ ಅಗತ್ಯವಿದ್ದು, ಮಕ್ಕಳು ಕಲಿತ ಶ್ಲೋಕಗಳನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಕಲಿಸಬೇಕು ಎಂದು ಕರೆ ನೀಡಿದರು.
ಸಂಸ್ಕೃತ ಶ್ಲೋಕಗಳ ಉಚ್ಚಾರಣೆಯಿಂದ ಮಕ್ಕಳ ಮನೋವಿಕಾಸ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ವಿದೇಶಗಳಲ್ಲಿಯೂ ಭಾರತೀಯ ಶ್ಲೋಕಗಳ ಮಹತ್ವ ಅರಿಯಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಮತ್ತು ಧಾರ್ಮಿಕ ಜಾಗೃತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಆಶೀರ್ವಚನ ನೀಡಿದ ಮುತ್ತಿನಕಂತಿ ಶ್ರೀಗಳು, ತಿಂಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳು ಸಂಸ್ಕಾರ ಹಾಗೂ ಶ್ಲೋಕಗಳನ್ನು ಅಭ್ಯಾಸ ಮಾಡಿರುವುದು ಶ್ಲಾಘನೀಯ ಎಂದರು. ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ ಎದ್ದು ಶ್ಲೋಕ ಪಠಣ, ಧ್ಯಾನ ಹಾಗೂ ಪ್ರಾರ್ಥನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶ್ಲೋಕ ಪಠಣದಿಂದ ವಾಕ್ ಶುದ್ಧಿ, ಮನಶಾಂತಿ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
“ಮಕ್ಕಳು ಕಲಿತ ಜ್ಞಾನವನ್ನು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಂಚಿಕೊAಡಾಗ ಮಾತ್ರ ಶಿಬಿರದ ಉದ್ದೇಶ ಸಾರ್ಥಕವಾಗುತ್ತದೆ. ಧರ್ಮ, ದೇಶ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ” ಎಂದು ಶ್ರೀಗಳು ಕರೆ ನೀಡಿದರು.
ತೃಪ್ತಿ ಬಟಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಗುರವ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಕೆಂಗನಾಳ ಸ್ವಾಗತಿಸಿ, ಪೃಥ್ವಿ ಠಾಕೂರ್ ವಂದಿಸಿದರು.
ಈ ಸಂದರ್ಭದಲ್ಲಿ ಸಾಗರ ಜಂಬಗಿ, ದೀಪಕ ಪಾಟೀಲ, ಸೂಮು ಮರೇನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.























