Home ಜಿಲ್ಲೆ ಕಲಬುರಗಿ ಸದ್ಗುಣ ಸಂಪನ್ನ ಮಕ್ಕಳೇ ಸಮಾಜದ ಆಸ್ತಿ

ಸದ್ಗುಣ ಸಂಪನ್ನ ಮಕ್ಕಳೇ ಸಮಾಜದ ಆಸ್ತಿ

ಕಲಬುರಗಿ ಅ.16: ಮಕ್ಕಳ ಭವಿಷ್ಯಕ್ಕಾಗಿ ಕೇವಲ ಭೌತಿಕ ಸಂಪತ್ತನ್ನು ಕೂಡಿಡುವುದಕ್ಕಿಂತ, ಅವರಿಗೆ ಉತ್ತಮ ಶಿಕ್ಷಣ ಮತ್ತು ಸದ್ಗುಣಗಳನ್ನು ಧಾರೆಯೆರೆದು ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ರೂಪಿಸುವುದು ಪ್ರತಿಯೊಬ್ಬ ತಂದೆ-ತಾಯಿಯ ಆದ್ಯ ಕರ್ತವ್ಯವಾಗಿದೆ” ಎಂದು ನರೋಣ ಹಾಗೂ ಗೋಳಾದ ಹೊಸಮಠದ ಪೂಜ್ಯ ಚನ್ನಮಲ್ಲ ಸ್ವಾಮಿಗಳು ನುಡಿದರು.
ನಗರದ ಅಡ್ವೊಕೇಟ್ಸ್ ಕಾಲೋನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ದಾನಮ್ಮ ದೇವಿಯ ಜೀವನ ದರ್ಶನದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಅವರು ಭಕ್ತರನ್ನುದ್ದೇಶಿಸಿ ಜ್ಞಾನಸುಧೆ ಹರಿಸಿದರು. ಗೌರಿ ನಾರಾಯಣ, ಗಾನಯೋಗಿ ಪಂಚಾಕ್ಷರಿ ,ಪುಟ್ಟರಾಜ ಗವಾಯಿಗಳು , ಬಸವಾದಿ ಶರಣರು ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳನ್ನು ಸ್ಮರಿಸುತ್ತಾ ತಮ್ಮ ಪ್ರವಚನ ಆರಂಭಿಸಿದ ಶ್ರೀಗಳು, ಸತ್ಸಂಗ ಹಾಗೂ ಶರಣಾಗತಿಯ ಮಹತ್ವವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು.
ಜಗತ್ತಿನಲ್ಲಿರುವುದು ಸಜ್ಜನರ ಮತ್ತು ದುರ್ಜನರ ಎಂಬ ಎರಡೇ ಕುಲಗಳು; ಸಜ್ಜನರ ಸಹವಾಸವು ಜೇನುತುಪ್ಪವಿದ್ದಂತೆ ಹಾಗೂ ದುರ್ಜನರ ಸಹವಾಸವು ಬಚ್ಚಲ ರೊಜ್ಜಿನಂತೆ (ಕೊಳಚೆ) ಎಂದು ಎಚ್ಚರಿಸಿದರು. ಕೇವಲ ಹದಿನೈದನೇ ವಯಸ್ಸಿಗೆ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ, ಹಸಿವಾದರೆ ಭಿಕ್ಷಾನ್ನ, ಬಾಯಾರಿದರೆ ಕೆರೆಯ ನೀರು ಸಾಕೆಂದು ಚೆನ್ನಮಲ್ಲಿಕಾರ್ಜುನನಿಗಾಗಿ ನಡೆದ ಅಕ್ಕಮಹಾದೇವಿಯ ಅದ್ವಿತೀಯ ವೈರಾಗ್ಯವನ್ನು ಅವರು ಸ್ಮರಿಸಿದರು.
ಪುರಾಣ ಪ್ರವಚನದ ವೇದಿಕೆಯು, ವೈದ್ಯಕೀಯ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ನಗರದ ಹಿರಿಯ ವೈದ್ಯರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮಕ್ಕೂ ಸಾಕ್ಷಿಯಾಯಿತು. ಸಮಾರಂಭದಲ್ಲಿ ಹಿರಿಯ ವೈದ್ಯರಾದ ಡಾ. ಎಂ . ಎಂ. ಕಾಳೆ, ಡಾ. ದೇವೇಂದ್ರಪ್ಪ ಚಿಂಚೋಳಿ, ಡಾ. ಬಿ.ಟಿ. ಪಾಲಾದಿ, ಡಾ. ಬಸವರಾಜ ಕೋತ್ಲಿ, ಡಾ. ನಾಗನಾಥ ಗಚ್ಚಿನಮನಿ, ಡಾ. ಶಿವಪುತ್ರಪ್ಪ ಹರವಾಳ, ಡಾ. ಶಕುಂತಲಾ ಬನ್ನಾಳೆ, ಡಾ. ಮಲ್ಲಾರಾವ್ ಮಲ್ಲೆ, ಡಾ. ಎಚ್.ವೀರಭದ್ರಪ್ಪ, ಡಾ . ಅನಿಲ್ ನಮೋಶಿ , ಡಾ . ರವೀಂದ್ರ ಶಹಾ, ಡಾ. ಅಭಯ್ ಬೋರಗಾಂವ್ಕರ್ ಹಾಗೂ ಡಾ. ವಿದ್ಯಾಸಾಗರ ಇಟಗಂಪಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ ನಮ್ಮ ಭವ್ಯ ಸಂಸ್ಕøತಿಯ ಕುರಿತು ಜಾಗೃತಿ ಮೂಡಿಸಲು, ಇಂಥ ಪುರಾಣ – ಪ್ರವಚನ, ಸತ್ಸಂಗ ಕಾರ್ಯಕ್ರಮಗಳ ಮೂಲಕ ಯತ್ನಿಸುತ್ತಿರುವ ಟ್ರಸ್ಟಿನ ಕಾರ್ಯವನ್ನು ಶ್ಲಾಘಿಸಿದ ಅವರು, ಸಮಾಜಕ್ಕೆ ಅನುಭವಿ ವೈದ್ಯರು ನೀಡಿದ ಅರ್ಧ ಶತಮಾನದ ಸೇವೆಯನ್ನು ಹೃತ್ಪೂರ್ವಕವಾಗಿ ಸ್ಮರಿಸಿದರು. ಸಾನಿಧ್ಯ ವಹಿಸಿದ್ದ ಪಾಳಾ ಮೂಲ ಕಟ್ಟಿ ಮಠದ ಪೂಜ್ಯ ಗುರುಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಟ್ರಸ್ಟನ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಭಕ್ತಾದಿಗಳು ಈ ಜ್ಞಾನ ದಾಸೋಹದಲ್ಲಿ ಪಾಲ್ಗೊಂಡು ಪುನೀತರಾದರು.
ಕಾರ್ಯದರ್ಶಿ ಆರ್ ಜೆ ಭೂಸಾರೆಸ್ವಾಗತಿಸಿ ನಿರೂಪಿಸಿದರು. ಅಧ್ಯಕ್ಷ ಮಂಜುನಾಥ ಜೇವರ್ಗಿ ವಂದಿಸಿದರು.