
ರಬಕವಿ-ಬನಹಟ್ಟಿ,ಮೇ.13 : ಉತ್ತರ ಕರ್ನಾಟಕ ಅಂಬೇಡ್ಕರ ಸೇನೆ ರಬಕವಿ-ಬನಹಟ್ಟಿ ಹಾಗೂ ಬೋಧಿಸತ್ವ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರರ 135ನೇ ಜಯಂತಿ ನಿಮಿತ್ಯ ಭೀಮೋತ್ಸವ-2026 ಅದ್ದೂರಿಯಾಗಿ ಸಂಪನ್ನಗೊಂಡಿತು.
ಕರ್ನಾಟಕ ಸರ್ಕಾರ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಂವಿಧಾನ ಪೀಠಿಕೆ ಓದುವ ಮೂಲಕ ಹಾಗೂ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂದಿನ ಪೀಳಿಗೆಗೆ ಡಾ.ಬಾಬಾಸಾಹೇಬರ ವಿಚಾರಗಳು ತಲುಪುವಂತೆ ಮಾಡುವುದು ಬಹು ಮಹತ್ತರ ಕಾರ್ಯವಾಗಿದೆ. ಇಂಥ ಕಾರ್ಯಕ್ರಮಗಳ ನಡೆಸುವ ಮೂಲಕ ಡಾ.ಬಾಬಾಸಾಹೇಬ ವಿಚಾರಗಳು ಎಂದಿಗೂ ಚಿರಸ್ಥಾಯಿಯಾಗುತ್ತವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಲಿಂಗ ಗೊಂಬಿಗುಡ್ಡ ಡಾ.ಅಂಬೇಡ್ಕರ್ ವಿಚಾರಧಾರೆಗಳ ದೀಪ ಬೆಳಗಿಸುವತ್ತ ನಾವು ಸದಾ ಕಾರ್ಯದಲ್ಲಿರುತ್ತೇವೆ ಹಾಗೂ ಮುಂದಿನ ಪೀಳಿಗೆಗೂ ಡಾ.ಅಂಬೇಡ್ಕ್‍ರ ವಿಚಾರಗಳನ್ನು ತಲುಪಿಸಲು ಬದ್ದರಾಗಿದ್ದೇವೆಂದರು.ಮುಖ್ಯ ಭಾಷಣಕಾರರಾದ ಡಾ.ವಿಠಲ ವಗ್ಗನ್ ಕಲಬುರ್ಗಿ ಮಾತನಾಡಿ ಡಾ.ಬಾಬಾಸಾಹೇಬರ ಶಕ್ತಿ ಮತ್ತು ದೇಶಕ್ಕೆ ಸಲ್ಲಿಸಿರುವ ಕೊಡುಗೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಡಾ.ಸಾಹುಕಾರ ಕಾಂಬ್ಳೆ ಡಾ.ಅಂಬೇಡ್ಕರ್ ವಾದದ ತಾರ್ಕಿಕ ಅಂತ್ಯದ ವಿಚಾರಬಾಗಿ ವಿಷಯ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ತೇರದಾಳ ಕ್ಷೇತ್ರದ ಕಾಂಗ್ರೆಸ್ ವರಿಷ್ಠ ಸಿದ್ದು ಕೊಣ್ಣೂರ ಡಾ.ಬಾಬಾಸಾಹೇಬರು ದೇಶಕ್ಕೆ ನೀಡಿದ ಅನುಪಮ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದ್ದು, ಅವರ ವಿಚಾರಗಳನ್ನು ಪಸರಿಸುವ ಕಾರ್ಯಗಳು ಹೆಚ್ಚಾಗಬೇಕು. ಯುವಪೀಳಿಗೆಗೆ ಡಾ.ಅಂಬೇಡ್ಕರ ವಿಚಾರ ಧಾರೆಗಳು ಹಾಗೂ ಸ್ವಾಭಿಮಾನ, ಸಮಾನತೆಯ ಅಂಶಗಳ ಅರಿವು ಮೂಡಿಸಲು ನಾನು ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ಭೀಮಶಿ ಮಗದುಂ, ಹನುಮಂತ ಕೊಣ್ಣುರ, ನಾಗೇಶ ಗಸ್ತಿ, ನೀಲೇಶ ದೇಸಾಯಿ, ಶ್ರೀಶೈಲ ಗಾಣಿಗೇರ, ಗೋಪಾಲ ಭಜಂತ್ರಿ, ಸಿದ್ದು ಆಸ್ಕಿ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿದ್ದರು. ಡಾ.ಬಾಬಾಸಾಹೇಬರ ಭವ್ಯ ಮೆರವಣಿಗೆಯು ಬನಹಟ್ಟಿ ಸಹಕಾರಿ ನೂಲಿನ ಗಿರಣಿಯಿಂದ ಪ್ರಮುಖ ಮಾರ್ಗಗಳ ಮೂಲಕ ಸಾಗಿ ರಬಕವಿ-ಬನಹಟ್ಟಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವರೆಗೆ ಜರುಗಿತು.























