Home ಜಿಲ್ಲೆ ಬೆಂಗಳೂರು ಡಿಜಿಟಲ್,ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಬಳಸಿ ಉದ್ಯಮಶೀಲರಾಗಿ

ಡಿಜಿಟಲ್,ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಬಳಸಿ ಉದ್ಯಮಶೀಲರಾಗಿ

ಕೋಲಾರ ೧೦- ಭಾರತದಲ್ಲಿ ಕೃಷಿ ಮತ್ತು ಕೃಷಿ ಮಾರುಕಟ್ಟೆಯ ಕುರಿತು ಕಾರ್ಯಾಗಾರದಲ್ಲಿ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ರೈತರು ಟಮೋಟೋ ಮಂಡಿ ಮಾಲೀಕರಾದ ಸಿ.ಎಂ.ಆರ್. ಶ್ರೀನಾಥ್ ರವರು ಮಾತನಾಡಿ ಹಿಂದಿನ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯಿಂದ ಹಿಡಿದು ಹಿಂದಿನ ಕೃತಕ ಬುದ್ಧಿಮತ್ತೆ (ಂI) ತನಕ ಭಾರತದಲ್ಲಿ ಕೃಷಿ ಮತ್ತು ಮಾರುಕಟ್ಟೆಯ ವಿಚಾರವಾಗಿ ಸವಿಸ್ತಾರವಾಗಿ ಚರ್ಚಿಸಿದರು.


ಹಿಂದೆ ತಾವು ಬೆಳೆದ ಉತ್ಪನ್ನಗಳನ್ನು ಅದಲು ಬದಲು ಮಾಡಿಕೊಳ್ಳುವ ವಹಿವಾಟು ನಂತರ ಸಾಂಪ್ರದಾಯಿಕ ಸಂತೆ, ಉತ್ಪನ್ನಗಳನ್ನು ಹೊತ್ತು ಮಾರುವುದು, ಬೀದಿ ಬದಿ ವ್ಯಾಪಾರ ಹೀಗೆ ಖಾಸಗಿಯಾಗಿ ನಡೆಸುತ್ತ ನಂತರ ದಿನಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ರೈತರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಹಾಪ್-ಕಾಮ್ಸ್ ಮತ್ತು ಸಫಲ್‌ನಂತ ಸರ್ಕಾರಿ ಸಾಮ್ಯದ ಸಂಸ್ಥೆಗಳು ಪ್ರಸ್ತುತ ಸಮಯಕ್ಕೆ ಕಾರ್ಯನಿರ್ವಹಿಸುತ್ತಿವೆ.


ಕೆಟ್ಟು ಹೋಗುವ ಉತ್ಪನ್ನಗಳನ್ನು ಶೀತಲಗೃಹಗಳಲ್ಲಿ ಶೇಖರಣೆ ಹಾಗೂ ಮೌಲ್ಯಾಧಾರಿತ ಉತ್ಪನ್ನಗಳ ತಯಾರಿಕೆ ಮತ್ತು ಅವುಗಳ ಮಾರಾಟದಿಂದ ವ್ಯವಸ್ಥೆಯಲ್ಲಿ ಸುಧಾರಿಸಬಹುದಾಗಿದೆ. ಕೃಷಿ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನ ಕಾಪಾಡುವುದು ಹಾಗೂ ಖಾಸಗಿ ಕಂಪನಿಗಳ ಪಾತ್ರದ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ರೈತರಿಗೆ ಅತ್ಯುತ್ತಮ ಬೆಲೆ ಸಿಗುವಂತೆ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಪಾರದರ್ಶಕತೆ ವಹಿವಾಟು ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ರೀತಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಕಾರ್ಯ ಪ್ರವೃತ್ತರಾದರೆ ಆರ್ಥಿಕ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆ.


ಆಧುನಿಕ ಮಾರುಕಟ್ಟೆ ವ್ಯವಸ್ಥೆಗಳಾದ ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ಮಾರುಕಟ್ಟೆ ಮೂಲಕ ಶೀಘ್ರ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಂತೆ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಾದ ಅಮೆಜಾನ್, ಜೊಮಾಟೋ, ನಿಂಜಾಕರ್ಟ್, ಬಿಗ್ ಬ್ಯಾಸ್ಕೆಟ್, ರಿಲೆಯನ್ಸ್ ಕಂಪನಿಗಳು ತೊಡಗಿಸಿಕೊಂಡಿರುವುದರಿಂದ ನೀವುಗಳು ಈ ರೀತಿಯ ವ್ಯವಸ್ಥೆಯನ್ನು ಬಳಸಿಕೊಂಡು ಉದ್ಯಮಿಗಳಾಗುವ ಮೂಲಕ ಸ್ವತಹ ಉದ್ಯಮಶೀಲರಾಗಲು ಸಾಧ್ಯವಾಗುತ್ತದೆ ಎಂದು ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು.


ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರಕುಮಾರ್ ಹಾಗೂ ಸಹ ಪ್ರಾಧ್ಯಾಪಕರಾದ ಮುನಿರಾಜು, ಡಾ. ನೀಲಕಂಠ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು