Home ಜಿಲ್ಲೆ ಕಲಬುರಗಿ ಒತ್ತಡ ನಿರ್ವಹಣೆಯ ಬಗ್ಗೆ ಜಾಗೃತಿ ಅಗತ್ಯ

ಒತ್ತಡ ನಿರ್ವಹಣೆಯ ಬಗ್ಗೆ ಜಾಗೃತಿ ಅಗತ್ಯ

ಕಲಬುರಗಿ : ಜೀವನದಲ್ಲಿ ಎದುರಾಗುವ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಗುರುತಿಸಿ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಥವಾ ಕಡಿಮೆ ಮಾಡಲು ಬಳಸುವ ವಿವಿಧ ತಂತ್ರಗಳು ಮತ್ತು ವಿಧಾನಗಳಿವೆ. ಅವುಗಳ ಬಗ್ಗೆ ತಿಳಿವಳಿಕೆ ಅಗತ್ಯವಾಗಿದೆ ಎಂದು ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ಬಸವಗಂಗಾ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಒತ್ತಡ ನಿರ್ವಹಣೆ ಜಾಗೃತಿ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿದಿನ ನಿಯಮಿತವಾಗಿ ವ್ಯಾಯಾಮ, ವಾಕಿಂಗ್ ಅಥವಾ ಯೋಗ ಮಾಡುವುದು ದೇಹದಲ್ಲಿನ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಆಳವಾದ ಉಸಿರಾಟದ ವ್ಯಾಯಾಮಗಳು ಧ್ಯಾನ ಮಾಡುವುದು, ಕೆಲಸಗಳನ್ನು ಸರಿಯಾಗಿ ಯೋಜನೆ ಮಾಡುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದರಿಂದ ಅನಗತ್ಯ ಗೊಂದಲ ಹಾಗೂ ಒತ್ತಡವನ್ನು ತಪ್ಪಿಸುವುದು, ದಿನಕ್ಕೆ 7-8 ಗಂಟೆಗಳ ಉತ್ತಮ ನಿದ್ರೆ, ಪೌಷ್ಟಿಕ ಆಹಾರ ಸೇವನೆ ಮತ್ತು ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಮಾನಸಿಕ ತಜ್ಞರ ಸಲಹೆ ಪಡೆಯುವುದು ಸೇರಿದಂತೆ ಮುಂತಾದ ವಿಧಾನ, ಕ್ರಮಗಳನ್ನು ಅನುಸರಿಸುವುದರಿಂದ ಒತ್ತಡ ಮುಕ್ತ ಜೀವನ ನಮ್ಮದಾಗುತ್ತದೆ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಕ್ಸಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಹಾಗೂ ಬಡಾವಣೆಯ ನಾಗರಿಕರು ಇದ್ದರು.