ಹೃದಯಾಘಾತ ತಡೆಗೆ ವಾರ್ಷಿಕ ತಪಾಸಣೆ

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರು ವರದಿ ತಯಾರಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ರವರಿಗೆ ವಿಕಾಸಸೌಧದಲ್ಲಿಂದು ವರದಿಯನ್ನು ಸಲ್ಲಿಸಿದರು.

ಬೆಂಗಳೂರು,ಜು.೭:ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳನ್ನು ತಡೆಯಲು ಶಾಲಾಮಕ್ಕಳು, ಸರ್ಕಾರಿ ನೌಕರರೂ ಸೇರಿದಂತೆ ಶಾಲಾ ಮಕ್ಕಳ ವಾರ್ಷಿಕ ನಿಯಮಿತ ಆರೋಗ್ಯ ತಪಾಸಣೆಗೆ ಸೂಕ್ತ ಯೋಜನೆಯನ್ನು ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.


ಹಠಾತ್ ಸಾವಿಗೆ ಕಾರಣವಾಗುವ ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯಸರ್ಕಾರ ಘೋಷಿಸುತ್ತಿದೆ ಎಂದು ಅವರು ಹರದಯಾಘಾತ ಸಾವುಗಳ ಬಗ್ಗೆ ಅಧ್ಯಯನಕ್ಕಾಗಿ ರಚಿಸಿದ್ದ ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಹೃದಯ ಸಂಬಂಧಿ ರೋಗಗಳನ್ನು ತಡೆಯಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕ್ರಮಕೈಗೊಂಡಿದೆ. ೧೫ ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮ್ಮೆ ಹೃದಯ ತಪಾಸಣೆ ನಡೆಸಲಾಗುವುದು. ಹಾಗೆಯೇ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೂ ವರ್ಷಕ್ಕೊಮ್ಮೆ ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ರೋಗಗಳ ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.


ಗೃಹ ಆರೋಗ್ಯ ಯೋಜನೆಯಡಿ ಈ ತಪಾಸಣೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.


ಹೃದಯಾಘಾತಗಳಿಗೆ ಜನರ ಜೀವನಶೈಲಿಯೇ ಕಾರಣವಾಗಿದೆ. ಕೋವಿಡ್ ಲಸಿಕೆಯಿಂದ ಹೃದಯಾಘಾತಗಳು ಆಗುತ್ತಿದೆ ಎಂಬ ಅಂಶಗಳು ಇಲ್ಲ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಧ್ಯಯನ ನಡೆದಿದೆ. ಕೋವಿಡ್ ಲಸಿಕೆಯಿಂದ ಜನರಿಗೆ ಒಳ್ಳೆಯದಾಗಿದೆ. ಜನರ ಜೀವ ಉಳಿದಿದೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಲಸಿಕೆಯಿಂದ ಹೃದಯಾಘಾತಗಳಾಗುತ್ತಿವೆ ಎಂಬ ಅನುಮಾನಗಳನ್ನು ನಿವಾರಿಸಲು ಮುಖ್ಯಮಂತ್ರಿಗಳು ತಜ್ಞರ ಸಮಿತಿ ರಚಿಸಿದ್ದರು. ಈ ಸಮಿತಿ ಅಧ್ಯಯನ ನಡೆಸಿದೆ. ಕೋವಿಡ್ ಲಸಿಕೆಯಿಂದ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದರು.


ಸಮಿತಿಯ ಶಿಫಾರಸ್ಸಿನಂತೆ ಆಸ್ಪತ್ರೆಯ ಹೊರಗೆ ಹಠಾತ್ ಹೃದ್ರೋಗದಿಂದ ಮರಣವಾಗುವುದನ್ನು ಗಮನದಲ್ಲಿಟ್ಟುಕೊಂಡು ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗುತ್ತಿದೆ.


ಈ ಸಾವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದರೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಹಮತ ಹೊಂದಿದೆ ಎಂದರು.


ಹೃದಯಾಘಾತ ತಡೆಗೆ ೬ ಶಿಫಾರಸ್ಸು


ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಯುವಜನರಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದ್ದು ಅದನ್ನು ತಡೆಯಲು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಕೆ.ಎಸ್ ರವೀಂದ್ರ ನಾಥ್ ನೇತೃತ್ವದ ತಂಡ ೬ ಪ್ರಮುಖ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.


ಯುವ ವಯಸ್ಕರಲ್ಲಿ ಹಠಾತ್ ಹೃದಯ ಸಾವುಗಳಿಗೆ ಹೃದಯ ಕಣ್ಗಾವಲು ಕಾರ್ಯಕ್ರಮ ಮತ್ತು ರಾಷ್ಟ್ರೀಯ ನೋಂದಣಿ ಸ್ಥಾಪಿಸುವುವಂತೆ ಸಲಹೆ ನೀಡಿದೆ.
ಜೊತೆಗೆ ಯುವ ವಯಸ್ಕರಲ್ಲಿ ವಿವರಿಸಲಾಗದ ಸಾವುಗಳಿಗೆ ಶವಪರೀಕ್ಷೆ ಆಧಾರಿತ ವರದಿ ಮತ್ತು ನೋಂದಣಿ ಮಾಡಬೇಕಾಗಿದೆ.


ಹೃದಯ ಕಾಯಿಲೆ ಶಾಲಾ ಮಟ್ಟದಲ್ಲಿ ದಿನನಿತ್ಯದ ಹೃದಯ ತಪಾಸಣೆ ಮಾಡಿಸಬೇಕು ಎಂದು ಹೇಳಿದೆ.


೧೦ ನೇ ತರಗತಿ ಅಂದರೆ ೧೫ ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಜನ್ಮಜಾತ ಹೃದಯ ಕಾಯಿಲೆಗಳು ಅಥವಾ , ಆನುವಂಶಿಕ ಲಯ ಅಸ್ವಸ್ಥತೆಗಳು, ಅಧಿಕ ತೂಕ ,ಬೊಜ್ಜು, ಅಧಿಕ ರಕ್ತದೊತ್ತಡ, ಲಿಪಿಡ್ ಅಸ್ವಸ್ಥತೆಗಳು ಮತ್ತು ಇನ್ಸುಲಿನ್ ಪ್ರತಿರೋಧ ಪರೀಕ್ಷಿಸಲು ವಿವರವಾದ ವೈದ್ಯಕೀಯ ಪರೀಕ್ಷೆ ಕಡ್ಡಾಯ ಮಾಡಬೇಕು ಎಂದು ತಿಳಿಸಿದೆ.


ಹೃದಯರಕ್ತನಾಳದ ಕಾಯಿಲೆಗಳು, ಅವುಗಳ ಕಾರಣಗಳು, ಅಪಾಯಕಾರಿ ಅಂಶಗಳು, ಆರಂಭಿಕ ಪತ್ತೆ ಮತ್ತು ತಡೆಗಟ್ಟುವ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಕುರಿತು ಸಾರ್ವಜನಿಕ ಆರೋಗ್ಯ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದೆ.


ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದು, ಧೂಮಪಾನವನ್ನು ನಿಲ್ಲಿಸುವುದು, ಪರದೆಯ ಸಮಯವನ್ನು ಕಡಿಮೆ ಮಾಡುವುದು,ಸಕ್ಕರೆ ಮತ್ತು ಉಪ್ಪು ಸೇವನೆ ಕಡಿಮೆ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು, ಒತ್ತಡವನ್ನು ನಿಭಾಯಿಸುವಂತೆ ಸಲಹೆ ನೀಡಲಾಗಿದೆ.


ಕೋವಿಡ್ ೧೯ ಸೋಂಕು ಮತ್ತು ಲಸಿಕೆ ಎರಡರ ದೀರ್ಘಕಾಲೀನ ಪರಿಣಾಮವನ್ನು ಅಧ್ಯಯನ ಮಾಡಲು ಬಹು-ಶಿಸ್ತಿನ ಸಹಯೋಗದ ಅಧ್ಯಯನ ನಡೆಸಲು, ಐಸಿಎಂಆರ್ ನಂತಹ ನೋಡಲ್ ಏಜೆನ್ಸಿಯಿಂದ ದೊಡ್ಡ ಪ್ರಮಾಣದ ನಿರೀಕ್ಷಿತ ಪ್ರಕರಣ ನಿಯಂತ್ರಣ ಕ್ಲಿನಿಕಲ್ ಅಧ್ಯಯನಗಳಿಗೆ ಸಂಶೋಧನಾ ವರದಿ ತರಿಸಿಕೊಳ್ಳುವುದು ಅಗತ್ಯ ಎಂದು ಮಾಹಿತಿ ನೀಡಿದೆ.