ಇರಾನ್ ಮೇಲೆ ಅಮೆರಿಕ ಬಾಂಬ್

ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿದ ಅಮೆರಿಕ,ಶಾಂತಿ ಸ್ಥಾಪನೆಗೆ ಈ ದಾಳಿ:ಟ್ರಂಪ್


ವಾಷಿಂಗ್ಟನ್,ಜೂ.೨೨:ಇಸ್ರೇಲ್-ಇರಾನ್ ಸಂಘರ್ಷದ ನಡುವೆಯೇ ಅಮೆರಿಕ ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇರಾನ್‌ನ ಮೂರು ಪರಮಾಣು ಸ್ಥಾವರಗಳಾದ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ದಾಳಿ ನಡೆಸಲಾಗಿದೆ.


ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ ನೀಡಿದ್ದು, ಇರಾನ್‌ನ ಮೂರು ಅಣುಕೇಂದ್ರಗಳ ಮೇಲೆ ಯಶಸ್ವಿ ಬಾಂಬ್ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ಅಮೆರಿಕದ ಎಲ್ಲ ವಿಮಾನಗಳು ಇರಾನ್ ವಾಯು ಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಅಣುಕೇಂದ್ರದ ಮೇಲೆ ಪೂರ್ಣಪ್ರಮಾಣದ ಫೆಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.


ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ, ಅಧ್ಯಕ್ಷ ಟ್ರಂಪ್ ಇರಾನ್‌ನ ಪರಮಾಣು ಸಾಮರ್ಥ್ಯ ನಾಶಪಡಿಸುವುದು ಮತ್ತು ವಿಶ್ವದ ನಂ.೧ ಭಯೋತ್ಪಾದನೆ ಪ್ರಾಯೋಜಿಸುವ ರಾಷ್ಟ್ರದಿಂದ ಉಂಟಾಗುವ ಪರಮಾಣು ಬೆದರಿಕೆಯನ್ನು ನಿಲ್ಲಿಸುವುದು ದಾಳಿಯ ಪ್ರಮುಖ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.


ಅಮೆರಿಕ-ಇಸ್ರೇಲ್ ಇದು ಇಡೀ ಜಗತ್ತಿಗೆ ಇದು ಐತಿಹಾಸಿಕ ಕ್ಷಣವಾಗಿದೆ. ಯುದ್ಧವನ್ನು ನಿಲ್ಲಿಸಲು ಇರಾನ್ ಈಗ ಸಿದ್ಧವಾಗಬೇಕು ಎಂದು ಟ್ರಂಪ್ ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಸ್ಥಾವರದ ಮೇಲೆ ಯಶಸ್ವಿ ದಾಳಿ ನಡೆಸಿದ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಅಮೆರಿಕ ಬಿಟ್ಟರೆ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.


ಈಗ ಶಾಂತಿಯ ಸಮಯ, ಒಂದು ವೇಳೆ ಇರಾನ್ ಪ್ರತಿರೋಧ ಒಡ್ಡಿದರೆ ಮತ್ತಷ್ಟು ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


ಇಂದು ರಾತ್ರಿ ನಾವು ನಡೆಸಿರುವ ದಾಳಿಯು ಅದ್ಭುತ ಯಶಸ್ವಿ ಕಂಡಿದೆ. ಇರಾನ್ ಪರಮಾಣು ಕೇಂದ್ರಗಳನ್ನು ನಾಶಪಡಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಇರಾನ್ ಶಾಂತಿ ಸ್ಥಾಪನೆಗೆ ಮುಂದಾಗದಿದ್ದರೆ ಭವಿಷ್ಯದ ದಾಳಿಗಳು ಮಾರಕವಾಗಿರುತ್ತದೆ. ಕಳೆದ ೮ ದಿನಗಳಲ್ಲಿ ಕಂಡಿರುವುದಕ್ಕಿಂತ ಹೆಚ್ಚಿನ ವಿನಾಶ ಉಂಟಾಗಲಿದೆ ನೆನಪಿಡಿ ಎಂದು ಇರಾನ್‌ಗೆ ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.


ಕಳೆದ ೪೦ ವರ್ಷಗಳಿಂದ ಇರಾನ್ ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು ಎಂದು ಹೇಳುತ್ತಲೇ ಬಂದಿದೆ. ಅವರು ನಮ್ಮವರನ್ನು ಕೊಲ್ಲುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದೇವೆ. ಅಲ್ಲದೆ ಮಧ್ಯಪ್ರಾಚ್ಯ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಇದನ್ನು ಹೀಗೆಯೇ ಮುಂದುವರೆಯಲು ಬಿಡಲು ಸಾಧ್ಯವಿಲ್ಲ. ನಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೂ ಅಭಿನಂದಿಸಲು ಬಯಸುತ್ತೇನೆ. ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಇರಾನ್‌ನ ಬೆದರಿಕೆಯನ್ನು ನಿರ್ಮೂಲನೆ ಮಾಡಲು ಮುಂದೆ ಸಾಗಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ಪ್ರತಿದಾಳಿ, ಪರಮಾಣು ಸೋರಿಕೆಯಾಗಿಲ್ಲ
ಅಮೆರಿಕದ ದಾಳಿ ಎಚ್ಚರಿಕೆಗೂ ಬಗ್ಗದ ಇರಾನ್, ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಸ್ವಲ್ಪ ಹೊತ್ತಿನ ನಂತರವೇ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ನಡೆಸಿ ಅಮೆರಿಕದ ಎಚ್ಚರಿಕೆ ತನಗೆ ಲೆಕ್ಕವಿಲ್ಲ ಎಂಬಂತೆ ನಡೆದುಕೊಂಡಿದೆ.


ಅಮೆರಿಕ ದಾಳಿಯನ್ನು ನಾವು ಸಹಿಸುವುದಿಲ್ಲ ನೀವು ದಾಳಿ ಆರಂಭಿಸಿದ್ದೀರಿ ಅದನ್ನು ನಾವು ಅಂತ್ಯಗೊಳಿಸುತ್ತೇವೆ ಎಂದು ಇರಾನ್ ಅಮೆರಿಕ್ಕೆ ಎಚ್ಚರಿಕೆ ನೀಡಿದೆ. ಇರಾನ್ ಪರಮಾಣು ನೆಲೆಗಳಮೇಲೆ ಅಮೆರಿಕ ನಡೆಸಿರುವ ವೈಮಾನಿಕ ದಾಳಿಯನ್ನು ಇರಾನ್‌ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಖಂಡಿಸಿದ್ದಾರೆ.


ಇಸ್ರೇಲ್‌ನ ಟೆಲ್‌ಅವಿವ್, ಹೈಫಾ ಮತ್ತು ಜೆರೊಸಲೆಂಗಳಲ್ಲಿ ಸ್ಫೋಟಗಳ ದೊಡ್ಡ ಸದ್ದು ಕೇಳಿ ಬಂದಿದ್ದು, ಸುಮಾರು ೨೫ ಕ್ಷಿಪಣಿಗಳು ಇರಾನ್‌ನಿಂದ ಬಂದು ಬಿದ್ದಿವೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.


ಇರಾನ್‌ನ ಪರಮಾಣು ಕೇಂದ್ರಗಳಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯಿಂದ ಇರಾನ್‌ನಲ್ಲಿ ಪರಮಾಣು ಸೋರಿಕೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳನ್ನು ಅರಿತು ಮೊದಲೇ ಎಲ್ಲವನ್ನೂ ಸ್ಥಳಾಂತರ ಮಾಡಲಾಗಿತ್ತು ಎಂದು ಇರಾನ್ ಹೇಳಿದೆ.
ಅಮೆರಿಕದ ದಾಳಿಯನ್ನು ಖಂಡಿಸಿರುವ ಇರಾನ್, ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕವು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.


ಟ್ರಂಪ್ ಹೊಗಳಿದ ನೆತನ್ಯಾಹು


ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿರುವ ಬಾಂಬ್ ದಾಳಿ ನಡೆಸಿರುವುದನ್ನು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಶಂಸಿಸಿದ್ದು, ಅಮೆರಿಕ ಅಧ್ಯಕ್ಷರ ನಡೆಯನ್ನು ಹೊಗಳಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಡಿಯೋ ಪೋಸ್ಟ್ ಹಂಚಿಕೊಂಡಿರುವ ನೆತನ್ಯಾಹು, ಶಕ್ತಿಯ ಮೂಲಕವು ಶಾಂತಿ ಸ್ಥಾಪಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಮೊದಲು ಶಕ್ತಿ ಪ್ರದರ್ಶನವಾದರೆ ನಂತರ ಶಾಂತಿ ನೆಲೆಸುತ್ತದೆ ಎಂದು ಅವರು ಹೇಳಿದ್ದಾರೆ.


ಶಾಂತಿ ಸ್ಥಾಪಿಸುವಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಇದು ಅತ್ಯಂತ ಯಶಸ್ವಿ ದಾಳಿಯಾಗಿದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.


ಅಮೆರಿಕ ನಿಜವಾಗಿಯೂ ಉತ್ತಮ ಕೆಲಸ ಮಾಡಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ಅವರು ತಿಳಿಸಿದ್ದಾರೆ.


ಅಮೆರಿಕ ಇರಾನ್‌ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿ ನಡೆಸಿರುವ ದಾಳಿಯನ್ನು ಇತಿಹಾಸ ಬದಲಿಸುತ್ತದೆ. ಆಪರೇಷನ್ ರೈಸಿಂಗ್ ಲೈನ್‌ನಲ್ಲಿ ಇಸ್ರೇಲ್ ನಿಜವಾಗಿಯೂ ಅದ್ಭುತವಾದ ಕೆಲಸ ಮಾಡಿದೆ. ಇರಾನ್‌ನ ಪರಮಾಣು ಸೌಲಭ್ಯಗಳು ವಿರುದ್ಧದ ಕ್ರಮದಲ್ಲಿ ಅಮೆರಿಕದ ನಿರ್ಧಾರ ಸರಿ ಇದೆ ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲಿನ ಅಮೆರಿಕ ದಾಳಿ ನಂತರ ಇಸ್ರೇಲ್ ಹೈಅಲರ್ಟ್‌ನಲ್ಲಿದೆ. ಇರಾನ್ ಮುಂದೇನು ಮಾಡಬಹುದೆಂಬುದನ್ನು ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ವಾರ್‌ರೂಂನಲ್ಲಿ ದಾಳಿ ವೀಕ್ಷಿಸಿದ ಟ್ರಂಪ್


ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸಿದ ಬಾಂಬ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ವಾರ್ ರೂಂನಲ್ಲಿ ಕುಳಿತು ವೀಕ್ಷಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಹಿರಿಯ ಸಲಹೆಗಾರರು ವಾರ್‌ರೂಂನಲ್ಲೇ ಕುಳಿತು ಇರಾನ್ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು ವೀಕ್ಷಿಸಿರುವ ಚಿತ್ರಗಳನ್ನು ಶ್ವೇತಭವನ ಇಂದು ಬಿಡುಗಡೆ ಮಾಡಿದೆ.
ಇರಾನ್ ಮೇಲಿನ ದಾಳಿ ಹಾಗೂ ನಂತರದ ಪರಿಸ್ಥಿತಿಯ ಬಗ್ಗೆಯೂ ಶ್ವೇತಭವನ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಬಿ-೨ ಬಾಂಬರ್‌ಗಳನ್ನು ಬಳಸಿ ಅಮೆರಿಕ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಇರಾನ್-ಇಸ್ರೇಲ್ ಸಂಘರ್ಷದಿಂದ ಇರಾನ್‌ನಲ್ಲಿ ಇದುವರೆಗೂ ಕನಿಷ್ಠ ೬೫೭ ಜನ ಮೃತಪಟ್ಟಿದ್ದು, ಇವರಲ್ಲಿ ೨೬೩ ನಾಗರೀಕರೂ ಸೇರಿದ್ದಾರೆ. ಜತೆಗೆ ೨ ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.