
ಕೋಲಾರ:- ಅಂಬೇಡ್ಕರ್‌ರನ್ನು ದಲಿತ ನಾಯಕ ಎಂಬ ಮಿತಿಯೊಳಗೆ ನೋಡದೆ ಸಮಸ್ತ ಸ್ತ್ರೀಕುಲದ ವಿಮೋಚಕ ವಿಶ್ವ ನಾಯಕ ಎಂಬಂತೆ ನೋಡಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಂಗಳವಾರ ಜೈ ಭೀಮ್ ಜೈಭಾರತ್ ಸಂಘಟನೆವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ೧೩೫ ನೇ ಜನ್ಮ ಜಯಂತಿ ಅಂಗವಾಗಿ ೭೦೦ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೈಹಿಕ ಹಾಗೂ ಮಾನಸಿಕ ವಿಮೋಚನೆಯ ಹಾದಿಯಲ್ಲಿ ಪ್ರತಿಯೊಬ್ಬರಿಗೂ ಮಾನವೀಯತೆಯ ಹೆದ್ದಾರಿಯನ್ನು ಹಾಕಿಕೊಟ್ಟ ಅಂಬೇಡ್ಕರ್ ಎಲ್ಲರಿಗೂ ಮಾದರಿ ಹಾಗೂ ಮಾರ್ಗದರ್ಶಕವಾಗುವಂತ ಪ್ರಜ್ವಲಿಸುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಆಧುನಿಕ ಭಾರತದ ಮೊದಲ ಮಹಿಳಾ ವಿಮೋಚಕರಾಗಿದ್ದಾರೆ, ಮಹಿಳೆಯರ ಹಕ್ಕುಗಳಿಗಾಗಿ ಹಿಂದೂ ಕೋಡ್ ಬಿಲ್ ರಚಿಸಿ ಹೋರಾಟ ನಡೆಸಿದರು, ವಿರೋಧ ವ್ಯಕ್ತವಾದಾಗ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹನೀಯರಾಗಿದ್ದಾರೆ ಎಂದು ಬಣ್ಣಿಸಿದರು. ಇದೇ ಆಧಾರದ ಮೇಲೆಯೇ ಸರಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಮತ್ತಿತರ ಯೋಜನೆಗಳನ್ನು ರೂಪಿಸಿ ನೀಡಿದ ಎಂದರು.
ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ದೇಶದ ಸಮಸ್ತ ಹೆಣ್ಣು ಮಕ್ಕಳಿಗೆ ಸಹೋದರಂತೆ ನಿಂತು ಅವರಿಗೂ ಸಮಾನ ಹಕ್ಕುಗಳು ಸಿಗಬೇಕೆಂಬ ಕಾರಣದಿಂದ ಕಾಯ್ದೆಗಳನ್ನು ರೂಪಿಸಿದ್ದರು, ಅವರ ಆದರ್ಶದಲ್ಲಿಯೇ ಜೈಭೀಮ್ ಜೈಭಾರತ್ ಸಂಘಟನೆಯು ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ವಸತಿ ಸಚಿವ ಜಮೀರ್ ಅಹ್ಮದ್ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ್ ಮಾತನಾಡಿ, ಅರ್ಥಪೂರ್ಣವಾಗಿ ಆಚರಿಸುತ್ತಿರುವ ಅಂಬೇಡ್ಕರ್ ಜಯಂತಿಯ ಮೂಲಕ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಉತ್ತಮ ಮೇಲ್ಪಂಕ್ತಿಯಾಗಿದೆ ಎಂದರು.
ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, ಅಂಬೇಡ್ಕರ್ ರ ಆಶಯಗಳನ್ನು ಕಡೆಗಣಿಸದೆ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಕುರುಬರಪೇಟೆ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಸರ್ವರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ನಾಯಕರೆಂದು ಗುರುತಿಸಿ ಗೌರವಿಸಬೇಕಾಗಿದೆ ಎಂದರು.
ಜೈ ಭೀಮ್ ಜೈ ಭಾರತ್ ಸಂಘಟನೆಯ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಮಹಿಳಾ ವರ್ಗದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಕೆ.ವಿ.ಪ್ರಭಾಕರ್ ಸಹಕಾರ ನೀಡಿ ಯಶಸ್ವಿಗೊಳಿಸಿದರೆಂದು ಹೇಳಿದರು.
ವೇದಿಕೆಯಲ್ಲಿ ಗುತ್ತಿಗೆದಾರ ಮಂಜುನಾಥ್, ಮುಖಂಡ ಖಾದ್ಪಿಪುರ ವೆಂಕಟಚಲಪತಿ, ಸಾಮ್ರಾಟ್ ಸುಬ್ಬು, ನಾರಾಯಣ್, ಮಾಹಿತಿ ಮಂಜುನಾಥ್, ಲಕ್ಷ್ಮಮ್ಮ, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಆರ್.ಚೇತನ್ ಬಾಬು ನಿರೂಪಿಸಿ, ಮಾರುತಿ ಮುರ್ತಿ ತಂಡದಿಂದ ಕ್ರಾಂತಿಗೀತೆಗಳ ಗಾಯನ, ಪರಿಸರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಚ್.ಎನ್.ಮೂರ್ತಿ ವಂದಿಸಿದರು.




















