Home ಜಿಲ್ಲೆ ವಿಶ್ವಶಾಂತಿಗೆ ಅಲ್ಲಮಪ್ರಭು ವಚನಗಳು ದಾರಿದೀಪ: ಲೋಕೇಶ ಉಡಬಾಳೆ

ವಿಶ್ವಶಾಂತಿಗೆ ಅಲ್ಲಮಪ್ರಭು ವಚನಗಳು ದಾರಿದೀಪ: ಲೋಕೇಶ ಉಡಬಾಳೆ

ಬೀದರ, ಮಾ 21:ನಗರದ ಅಲ್ಲಮಪ್ರಭು ಬಡಾವಣೆಯಲ್ಲಿ ಶ್ರೀ ಅಲ್ಲಮಪ್ರಭು ದೇವರ ಜನ್ಮದಿನೋತ್ಸವವನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ವೇದಿಕೆಯ ಮೇಲಿರುವ ಗಣ್ಯರು ಶ್ರೀ ಅಲ್ಲಮಪ್ರಭು ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಸದಸ್ಯರಾದ ಶರಣ ರಾಜಾರಾಮ ಚಿಟ್ಟಾ ಅವರು ಮಾತನಾಡಿ, ನಗರದ ಜನರು ಪರಿಶುದ್ಧ ಹಾಗೂ ಶ್ರಮಜೀವಿಗಳಾಗಿದ್ದು, ಪ್ರತಿವರ್ಷ ಅಲ್ಲಮಪ್ರಭು ಜಯಂತಿಯನ್ನು ಆಚರಿಸುವುದು ಅವರ ಕಾಯಕ ಮತ್ತು ತ್ಯಾಗಮಯ ಜೀವನಕ್ಕೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು. ಅಲ್ಲಮಪ್ರಭುಗಳ ತತ್ವಗಳು ಇಂದಿನ ಆಧುನಿಕ ಜೀವನಕ್ಕೆ ಮಾರ್ಗದರ್ಶಕವಾಗಿವೆ ಎಂದರು.

ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಚೆನ್ನಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಶರಣ ಲೋಕೇಶ ಉಡಬಾಳೆ ಅವರು ಮಾತನಾಡಿ, ಅಲ್ಲಮಪ್ರಭುಗಳು 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿದ್ದು, ಕಲ್ಯಾಣದ ಅನುಭವ ಮಂಟಪದ ಶೂನ್ಯ ಪೀಠದ ಸಿಂಹಾಸನಾಧಿಪತಿಗಳಾಗಿದ್ದರು. “ಗುಹೇಶ್ವರ” ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿ ಆತ್ಮಜ್ಞಾನ, ವೈರಾಗ್ಯ ಹಾಗೂ ಶೂನ್ಯ ತತ್ವವನ್ನು ಸಾರಿದ ಅವರ ವಚನಗಳು ಇಂದಿಗೂ ವಿಶ್ವಶಾಂತಿಗೆ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.

ಯೇಸ್ ಅಕಾಡೆಮಿ ಸಂಸ್ಥಾಪಕರಾದ ಶ್ರೀ ಶಿವಾನಂದ ತಾದಲಾಪೂರೆಯವರು ಮಾತನಾಡಿ, ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ಮತ್ತು ದಾಸೋಹದಲ್ಲಿ ನಿರತರಾಗಬೇಕು ಎಂದು ಹೇಳಿದರು. ಅಲ್ಲಮಪ್ರಭು ಜಯಂತಿ ನಡೆಯುವವರೆಗೂ ದಾಸೋಹ ಸೇವೆಯನ್ನು ನಿರಂತರವಾಗಿ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಘನಾಧ್ಯಕ್ಷತೆ ವಹಿಸಿದ್ದ ಶರಣ ಮಲ್ಲಯ್ಯ ಸ್ವಾಮಿಯವರು ಮಾತನಾಡಿ, ಸಮಾನತೆ, ಭಕ್ತಿ, ಧರ್ಮನಿಷ್ಠೆ ಹಾಗೂ ಆಂತರಿಕ ಶುದ್ಧತೆ ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವಶಾಂತಿ ಸಾಧಿಸಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಶರಣೆ ರೇಣುಕಾ ರಾಜಕುಮಾರ ತೆಲಗಾಣೆ ಹಾಗೂ ಶರಣೆ ಆರ್ಚನಾ ಸ್ವಾಮಿಯವರು ಸಾಮೂಹಿಕ ಪ್ರಾರ್ಥನಾ ಗೀತೆ ಹಾಡಿದರು. ಶರಣ ಶಶಿಕಾಂತ ಹೊಸದೊಡ್ಡ ಸ್ವಾಗತ ಕೋರಿದರು. ಶರಣ ಸುಜೀತಕುಮಾರ ಪಿ ಕಾರ್ಯಕ್ರಮ ನಿರ್ವಹಿಸಿದರು. ಶರಣ ಶಿವರಾಜ ಪಟ್ಟಿ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಸಮಸ್ತ ಶರಣ-ಶರಣೆಯವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.