
ಬೆಂಗಳೂರು, ಜು. ೪- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ನಿಯಮಾವಳಿಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮುಖ್ಯಕಾರ್ಯದರ್ಶಿ ವಿರುದ್ಧ ಕೆಟ್ಟದ್ದಾಗಿ ಮಾತನಾಡಿರುವ ರವಿಕುಮಾರ್ ಅವರನ್ನು ಅಮಾನತು ಮಾಡುವಂತೆ ಕೋರಿ ಪ್ರದೇಶ ಕಾಂಗ್ರೆಸ್ ಸಮಿತಿ ನಮಗೆ ದೂರು ಕೊಟ್ಟಿದೆ. ಈ ಸಂಬಂಧ ರವಿಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ. ಅವರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.
ರವಿಕುಮಾರ್ ಅವರ ಸದಸ್ಯತ್ವ ರದ್ದು ಮಾಡುವ ಅಧಿಕಾರ ನನಗೆ ಇಲ್ಲ. ಕಾನೂನು ತ ಜ್ಞರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುತ್ತೇನೆ. ಪರಿಷತ್ ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು
ಇದು ವಿಧಾನಸಭೆಯ ಪರಿಮಿತಿಯಲ್ಲಿ ನಡೆದಿದೆ ಅದಕ್ಕೆ ನಾನು ಪತ್ರ ಬರೆದಿದ್ದೇನೆ. ಅವರ ಅಭಿಪ್ರಾಯ ಪಡೆಯದೇ ನಾನೇನು ಕ್ರಮ ತೆಗೆದುಕೊಳ್ಳಲು ಆಗುವುದಲ್ಲ ಅವರ ಅಭಿಪ್ರಾಯ ಬರಲಿ ಎಂದರು
ವಿದಾನಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರನ್ನು ಬಂಧಿಸಿದರೆ ಮಾಹಿತಿ ಕೊಡಬೇಕು ಅಷ್ಟೇ ಎಂದು ಬಸವರಾಜಹೊರಟ್ಟಿ ಹೇಳಿದರು.