
ಯಾದಗಿರಿ:ಮೇ.೧೨:ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ “ಫ್ಯಾಕ್ಟ್ ಚೆಕ್” ರಾಜಕಾರಣದಲ್ಲಿ ತೊಡಗಿಕೊಂಡಿರುವ ವೇಳೆ, ಕಲ್ಯಾಣ ಕರ್ನಾಟಕ ಭಾಗದ ಜನರು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ತಮ್ಮದೇ ಇಲಾಖೆಯ ವೈಫಲ್ಯವನ್ನು ಮರೆಮಾಚಲು ಪ್ರಚಾರ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಅಧಿಕೃತ ಅಂಕಿಅAಶಗಳನ್ನೇ ಉಲ್ಲೇಖಿಸಿ ಸರ್ಕಾರದ ಆಡಳಿತ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಒಟ್ಟು ೩೯೬೫ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ೨೯೮೭ ಘಟಕಗಳಲ್ಲಿ ಕೇವಲ ೧೭೦೮ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ ಶೇ.೪೩ ರಷ್ಟು ಘಟಕಗಳು ಸ್ಥಗಿತಗೊಂಡು ನಿರುಪಯುಕ್ತವಾಗಿವೆ ಎಂದು ದೂರಿದರು.
ಕಳೆದ ಮೂರು ವರ್ಷಗಳಲ್ಲಿ ಈ ಘಟಕಗಳ ನಿರ್ವಹಣೆ ಮತ್ತು ದುರಸ್ತಿ ಹೆಸರಿನಲ್ಲಿ ?೧೭ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ. “ಇಷ್ಟೊಂದು ಹಣ ಖರ್ಚಾದರೂ ೧೨೭೯ ಘಟಕಗಳು ಏಕೆ ಕಾರ್ಯನಿರ್ವಹಿಸುತ್ತಿಲ್ಲ? ಈ ಹಣ ಯಾರ ಜೇಬಿಗೆ ಸೇರಿದೆ? ದುರಸ್ತಿ ಕಾರ್ಯಗಳಿಗೆ ಆದೇಶ ನೀಡಲು ಸರ್ಕಾರಕ್ಕೆ ಪುರುಸೊತ್ತಿಲ್ಲವೇ?” ಎಂದು ಪ್ರಶ್ನಿಸಿದರು.
ಒಂದು ಕಡೆ ಸರ್ಕಾರ ಅಭಿವೃದ್ಧಿಯ ಬಣ್ಣದ ಜಾಹೀರಾತುಗಳನ್ನು ನೀಡುತ್ತಿದ್ದರೆ, ಮತ್ತೊಂದು ಕಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಇದು ಅಭಿವೃದ್ಧಿಯಲ್ಲ, ಜನರ ಸಂಕಷ್ಟದ ಮೇಲೆ ನಡೆಯುತ್ತಿರುವ ಪ್ರಚಾರ ರಾಜಕಾರಣ ಎಂದು ಕಿಡಿಕಾರಿದರು.
ಸಚಿವರ ಉಸ್ತುವಾರಿ ಜಿಲ್ಲೆಯಾದ ಕಲಬುರಗಿಯಲ್ಲೇ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆರೋಪಿಸಿದ ಅವರು, ಜಿಲ್ಲೆಯ ೫೧೦ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ ೧೩೨ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಂದರೆ ಶೇ.೭೫ ರಷ್ಟು ಘಟಕಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.
“ಸ್ವಂತ ಜಿಲ್ಲೆಯಲ್ಲೇ ಜನರಿಗೆ ಕುಡಿಯುವ ನೀರು ಒದಗಿಸಲಾಗದವರು ರಾಜ್ಯದ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವುದು ರಾಜಕೀಯ ದುರಹಂಕಾರದ ಪರಮಾವಧಿಯಾಗಿದೆ,” ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಿಗಿಂತ ಕಾಂಗ್ರೆಸ್ ಸರ್ಕಾರದ “ಪ್ರಚಾರ ಮಂತ್ರಿ”ಯಾಗಿ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಛಲವಾದಿ ನಾರಾಯಣಸ್ವಾಮಿ, “ಖSS ಮತ್ತು ವಿರೋಧ ಪಕ್ಷಗಳನ್ನು ಟೀಕಿಸಲು ಬಳಸುವ ಸಮಯದ ಅರ್ಧದಷ್ಟನ್ನಾದರೂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಿದ್ದರೆ ಇಂದು ಕಲ್ಯಾಣ ಕರ್ನಾಟಕದ ಜನರು ಬೀದಿಗಿಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಹೇಳಿದರು.
“ಬೇರೆಯವರ ತಟ್ಟೆಯಲ್ಲಿ ಏನಿದೆ ಎಂದು ನೋಡುವ ಮುನ್ನ, ತಮ್ಮ ಇಲಾಖೆಯ ತಟ್ಟೆಯಲ್ಲಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಬೇಕು. ನಿಮ್ಮ ಇಲಾಖೆಯ ವೈಫಲ್ಯದ ಬಗ್ಗೆ ಯಾರು ಫ್ಯಾಕ್ಟ್ ಚೆಕ್ ಮಾಡಬೇಕು?” ಎಂದು ಪ್ರಶ್ನಿಸಿದರು.
“ಜನರ ಸಮಸ್ಯೆಗಳಿಗೆ ಉತ್ತರ ಕೊಡಿ, ಅಂಕಿಅAಶಗಳಿಗೆ ಉತ್ತರ ಕೊಡಿ, ನೀರಿಲ್ಲದೆ ನರಳುತ್ತಿರುವ ಕಲ್ಯಾಣ ಕರ್ನಾಟಕದ ಜನರಿಗೆ ಉತ್ತರ ಕೊಡಿ,” ಎಂದು ಆಗ್ರಹಿಸಿದ ಅವರು, “ಪ್ರಚಾರದ ಬೆಳಕಿನಲ್ಲಿ ಆಡಳಿತದ ವೈಫಲ್ಯವನ್ನು ಹೆಚ್ಚು ದಿನ ಮರೆಮಾಚಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.























