
ಲಕ್ಷ್ಮೇಶ್ವರ,ನ೮: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಲಕ್ಷ್ಮೇಶ್ವರದಲ್ಲಿ ಈ ಹಿಂದೆ ಸರ್ಕಾರವನ್ನೇ ಎಚ್ಚರಿಸುವ ರೀತಿಯಲ್ಲಿ ನಡೆದ ಗೋವಿನಜೋಳದ ಮಾದರಿ ಹೋರಾಟವನ್ನು ಮತ್ತೊಮ್ಮೆ ರೂಪಿಸುವುದು ಅನಿವಾರ್ಯವಾಗಲಿದೆ. ರೈತರನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದರ ಜತೆಗೆ ಲಕ್ಷ್ಮೇಶ್ವರ ಬಂದ್ ಮಾಡಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಹಾಗೂ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಎಚ್ಚರಿಸಿದರು.
ಅವರು ಪಟ್ಟಣದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ವಿವಿಧ ರೈತರ ಸಂಘಟನೆಗಳ ಸಹಯೋಗದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ಮಧ್ಯ ಕರ್ನಾಟಕದ ಒಣ ಬೇಸಾಯದ ರೈತರ ಸಂಕಷ್ಟಕ್ಕೂ ಸ್ಪಂದಿಸಬೇಕು. ತುರ್ತು ಬೆಳೆ ಪರಿಹಾರ ಹೆಚ್ಚಳ, ೨೦೨೫-೨೬ನೇ ಸಾಲಿನ ಮೆಣಸಿನಕಾಯಿ ಬೆಳೆ ವಿಮೆ, ೨೦೨೬-೨೭ನೇ ಸಾಲಿನ ಮುಂಗಾರು ಬೆಳೆಗಳಿಗೆ ಮಧ್ಯಂತರ ವಿಮೆ ಪರಿಹಾರ, ಸಂಪೂರ್ಣ ಕೃಷಿ ಸಾಲಮನ್ನಾ, ಬ್ಯಾಂಕ್ ಸಾಲ ವಸೂಲಾತಿ ಸ್ಥಗಿತ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಗೋಶಾಲೆಗಳ ಆರಂಭ ಹಾಗೂ ವಿದ್ಯುತ್ ಸಂಪರ್ಕ ಕಡಿತ ನಿಲ್ಲಿಸಬೇಕು. ಮತ್ತೊಮ್ಮೆ ಅಂಥದ್ದೇ ಹೋರಾಟಕ್ಕೆ ರೈತರು ಸಜ್ಜಾಗಬೇಕು. ಮುಂಗಾರು ಹಿಂಗಾರು ಮಳೆಯಿಲ್ಲದೇ ಜನ-ಜಾನುವಾರುಗಳಿಗೆ ಆಹಾರ, ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದೂರದೃಷ್ಟಿಯ ಚಿಂತನೆ, ಯೋಜನೆಗಳ ಬಗ್ಗೆ ಅರಿವಿಲ್ಲ.. ತಾಲೂಕಿನಲ್ಲಿ ಕೆರೆಗಳು, ಬೋರ್ವೆಲ್ಗಳು ಬತ್ತುತ್ತಿವೆ. ಕುಡಿಯುವ ನೀರಿನ ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಗ್ರಹಣ ಹಿಡಿದಿವೆ.. ಎಂದು ಆರೋಪಿಸಿದ ಅವರು ಬರ ಘೋ?Àಣೆ ಕೇವಲ ಕಾಗದಕ್ಕೆ ಸೀಮಿತವಾಗದೆ ಪರಿಹಾರ ಕಾರ್ಯಗಳು ತಕ್ಷಣ ರೈತರ ಕೈ ಸೇರಬೇಕು. ನ. ೩೦ರೊಳಗೆ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಲಕ್ಷ್ಮೇಶ್ವರ ಬಂದ್ ಹಾಗೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ರೂಪಿಸಲಾಗುವುದು ಎಂದರು.
ಕೃಷಿಕ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, ರೈತರು ಭಿಕ್ಷುಕರಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಬರ ಪರಿಹಾರ ಒದಗಿಸುವ ಜವಾಬ್ದಾರಿ ಹೊಂದಿವೆ. ವಿರೋಧ ಪಕ್ಷದ ಸಂಸದರು, ಶಾಸಕರು ಕೂಡ ರೈತರ ಪರವಾಗಿ ಧ್ವನಿ ಎತ್ತಬೇಕು. ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕ್ರಮಗಳನ್ನು ತ್ವರಿತಗೊಳಿಸಿ ನ. ೩೦ರೊಳಗೆ ಪರಿಹಾರೋಪಾಯಗಳನ್ನು ಕಲ್ಪಿಸಬೇಕು. ರೈತರ ಒಗ್ಗಟ್ಟಿನ ಹೋರಾಟಕ್ಕೆ ಸರ್ಕಾರ ಮಣಿಯಲೇಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ರೈತ ಮುಖಂಡ ಹೊನ್ನಪ್ಪ ವಡ್ಡರ ಮಾತನಾಡಿ, ಸರ್ಕಾರ ನೀಡುವ ಈಗಿನ ಪರಿಹಾರ ಯಾವುದಕ್ಕೂ ಸಾಲದು. ರೈತರಿಗೂ ಎಕರೆಗೆ ಕನಿಷ್ಠ ೨೫ರಿಂದ ೩೦ ಸಾವಿರ ತುರ್ತು ಪರಿಹಾರ ನೀಡಬೇಕು. ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿ ರೈತರಿಲ್ಲ. ಬ್ಯಾಂಕ್ಗಳಿಗೆ ಸಾಲ ವಸೂಲಾತಿ ನೊಟೀಸ್ ನಿಲ್ಲಿಸುವಂತೆ ಸರ್ಕಾರ ಸೂಚಿಸಬೇಕು ಎಂದರು.
ತಾಲೂಕಾ ರೈತ ಸಂಘದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ತಾಂತ್ರಿಕ ಮಾನದಂಡಗಳ ನೆಪದಲ್ಲಿ ರೈತರಿಗೆ ಬೆಳೆ ವಿಮೆ ನಿರಾಕರಿಸದೆ ತಾಲೂಕಿನ ಎಲ್ಲ ಅರ್ಹ ರೈತರಿಗೂ ವಿಮೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಮೆಣಸಿನಕಾಯಿ, ಶೇಂಗಾ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳ ಕಟಾವು ಮುಗಿದಿದೆ. ಅಧಿಕಾರಿಗಳ ಸಭೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಮುಂಗಾರು ಮತ್ತು ಹಿಂಗಾರು ಎರಡೂ ವಿಫಲವಾಗಿರುವುದರಿಂದ ಜನರು ಹಾಗೂ ಜಾನುವಾರುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಬರ ಘೋಷಣೆ ಹೊರತುಪಡಿಸಿ ಯಾವುದೇ ಪೂರಕ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ರೈತರ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ರೈತ ಮುಖಂಡರದ ನಾಗರಾಜ ಚಿಂಚಲಿ, ಬಸವರಾಜ ಹಿರೇಮನಿ ಮಾತನಾಡಿ, ೨,೫೦೦ ಪರಿಹಾರ ಪಡೆಯಲೂ ಸರ್ಕಾರ ಹತ್ತಾರು ನಿಬಂಧನೆಗಳನ್ನು ವಿಧಿಸಿದೆ. ಪ್ರಚಾರಕ್ಕೆ ಸೀಮಿತವಾಗದೆ ರೈತರ ಸಂಕ?À್ಟದತ್ತ ಗಮನಹರಿಸಬೇಕು ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂಬುದಕ್ಕೆ ಈ ಹಿಂದಿನ ಗೋವಿನಜೋಳದ ಮಾದರಿ ಹೋರಾಟವೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಟಾಕಪ್ಪ ಸಾತಪುತೆ, ನಿಂಬಣ್ಣ ಮಡಿವಾಳರ, ಚನ್ನಬಸನಗೌಡ ಉದ್ದನಗೌಡ್ರ, ಪ್ರಕಾಶ ಗುತ್ತಲ, ಶಿವನಗೌಡ್ರ ಆಡರಕಟ್ಟಿ, ಮಲ್ಲಿಕಾರ್ಜುನ ಅಂಕಲಿ, ಶಿವಣ್ಣ ಬನ್ನಿಮಟ್ಟಿ, ಈರಪ್ಪ ಮಾಗಡಿ, ಬಸವರಾಜ ಕರೆಯತ್ತಿನ, ಜಂಜನಗೌಡ ನರಸಮ್ಮನವರ, ಬಸವರಾಜ ಪ್ಯಾಟಿ, ಶಿವಾನಂದ ಬನ್ನಿಮಟ್ಟಿ, ಶಂಕರ ಬ್ಯಾಡಗಿ, ನಾಮದೇವ ಮಾಂಡ್ರೆ, ಚಂದ್ರು ಮಾಗಡಿ, ಬಸವರಾಜ ಜಾಲಗಾರ, ಸಿದ್ದು ಪೂಜಾರ, ಮುತ್ತಣ್ಣ ನೀರಲಗಿ, ನಾಗಪ್ಪ ಓಂಕಾರಿ, ಗುರಪ್ಪ ಮುಳಗುಂದ, ಮಹಾಂತೇಶ ಉಮಚಗಿ, ಪವನ ಬಂಕಾಪುರ, ಲಕ್ಷ್ಮವ್ವ ಕರೆಯತ್ತಿನ, ನೀಲಮ್ಮ ಕೊಂಗಿ, ಶಾಂತವ್ವ ಹಾಲನಗೌಡ್ರ ಸೇರಿದಂತೆ ಲಕ್ಷೆö್ಮÃಶ್ವರ ಹಾಗೂ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಪಟ್ಟಣದ ಶಿಗ್ಲಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹತ್ತಾರು ಎತ್ತು ಚಕ್ಕಡಿ, ಹಲಗೆ ಸದ್ದಿನೊಂದಿಗೆ ಪ್ರಾರಂಭವಾದ ಮೆರವಣಿಗೆ ಮುಖ್ಯ ಬಜಾರ್ ರಸ್ತೆಯ ಮೂಲಕ ತಹಸೀಲ್ದಾರರ ಕಚೇರಿವರೆಗೆ ಸಾಗಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯಲ್ಲಿ ರೈತರ ಬೇಡಿಕೆ ಈಡೇರಿಕೆಗಳ ಘೋಷಣೆ ಮೊಳಗಿತು. ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ ಅವರು ರೈತರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ. ಅಲ್ಲದೇ ನ.೧೧ ರಂದು ಮಧ್ಯಾಹ್ನ ೩ ಕ್ಕೆ ತಹಸೀಲ್ದಾರ ಕಚೇರಿಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರೈತರ ಸಭೆ ಮಾಡಲಾಗುತ್ತದೆ ಎಂದರು.




















