
ಜೇವರಗಿ,ನ.4: ನ್ಯಾಯದ ಪರವಾಗಿ ಹೋರಾಡುವ ವಕೀಲರ ಮೇಲಿನ ಹಲ್ಲೆ, ಬೆದರಿಕೆ ಹಾಗೂ ವೃತ್ತಿಪರ ಕರ್ತವ್ಯಕ್ಕೆ ಅಡ್ಡಿಪಡಿಸುವ ಘಟನೆಗಳನ್ನು ತಡೆಗಟ್ಟಲು ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜೇವರ್ಗಿ ತಾಲೂಕು ನ್ಯಾಯವಾದಿಗಳ ಸಂಘವು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ವಕೀಲರು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹಗಲು-ರಾತ್ರಿ ಎನ್ನದೆ ಕಾನೂನು ಹೋರಾಟ ನಡೆಸುತ್ತಾರೆ. ಕಕ್ಷಿದಾರರ ಹಕ್ಕುಗಳ ರಕ್ಷಣೆ, ನ್ಯಾಯಾಂಗ ವ್ಯವಸ್ಥೆಯ ಗೌರವ ಹಾಗೂ ಸಂವಿಧಾನಬದ್ಧ ನ್ಯಾಯದ ಸ್ಥಾಪನೆಗಾಗಿ ಕಾರ್ಯನಿರ್ವಹಿಸುವ ವಕೀಲರೇ ಇಂದು ಹಲ್ಲೆ ಮತ್ತು ಬೆದರಿಕೆಗಳ ಆತಂಕ ಎದುರಿಸುವಂತಾಗಿದೆ. ಇಂತಹ ಘಟನೆಗಳಿಂದ ವಕೀಲರು ನಿರ್ಭೀತಿಯಿಂದ ವೃತ್ತಿ ನಿರ್ವಹಿಸಲು ಅಡ್ಡಿಯಾಗುತ್ತಿದ್ದು, ಅವರ ಸುರಕ್ಷತೆಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕೆಂದು ಸಂಘವು ಮನವಿಯಲ್ಲಿ ಒತ್ತಾಯಿಸಿದೆ.
ಈ ಕುರಿತು ನವೆಂಬರ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೇವರ್ಗಿ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಗಿದ್ದು, ವಕೀಲರ ರಕ್ಷಣೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ.
ವಕೀಲರ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವಕೀಲರ ಮೇಲೆ ಹಲ್ಲೆ ನಡೆಸುವ ಹಾಗೂ ಹಲ್ಲೆಗೆ ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರ ಸುರಕ್ಷತೆ ಮತ್ತು ವೃತ್ತಿಪರ ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ಹೆಚ್ಚಿನ ಭದ್ರತೆ ಒದಗಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ರಾಜಶೇಖರ್ ಎಸ್ ಶಿಲ್ಪಿ ,ಭಾಷಾ ಪಟೇಲ್ ಯಾಳವರ್, ಮಲ್ಲಿಕಾರ್ಜುನ್ ಪೂಜಾರಿ, ಡಿಎಫ್ ಕೊಂಡಗೊಳ್,ಅಪ್ಪಸಾಬ.ಕೊಳಕೂರ್,ದಯಾನಂದ್ ಕಂದಗಲ್,ರಾಜು ಶಕಾಪೂರ,ರಾಜು ಸರ್ಕಾರ್, ಶಿವು ಕೊಡಚಿ,ಸಿದ್ದು ಯಂಕಂಚಿ, ಬಸವರಾಜ್ ಮದರಿ,ಸೈಬಣ್ಣ ಕಾಂಬಳೆ, ಬಸವರಾಜ ಕೊಂಬಿನ,ಸಂತೋಷ ಆಲೂರು,ಕೆಂಚಪ್ಪಗೌಡ ಬಿರಾದರ್,ಶೇಖರ್ ಮಾಲಗತ್ತಿ, ಕಾಶಿಮ್ ಮುನಿಯರ್,ಮಲ್ಲು ಸೊನ್ನದ್, ಅಶೋಕ್ ಜಿರ್,ತುಳಜಾರಾಮ್ ರಾಠೋಡ್ ಸೇರಿದಂತೆ ಸಂಘದ ಪದಾಧಿಕಾರಿಗಳು,ನ್ಯಾಯವಾದಿಗಳು ಉಪಸ್ಥಿತರಿದ್ದರು.





















