Home ಜಿಲ್ಲೆ ಕಲಬುರಗಿ ಕೃಷಿಕರ ಸುಸ್ಥಿರ ಅಭಿವೃದ್ಧಿಗೆ ಜಲಸಮೃದ್ಧಿ ಭದ್ರ ಅಡಿಪಾಯ:ಡಾ. ಅಜಯಸಿಂಗ್

ಕೃಷಿಕರ ಸುಸ್ಥಿರ ಅಭಿವೃದ್ಧಿಗೆ ಜಲಸಮೃದ್ಧಿ ಭದ್ರ ಅಡಿಪಾಯ:ಡಾ. ಅಜಯಸಿಂಗ್

ಕಲಬುರಗಿ,ನ.4:ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳು, 41 ಅಸೆಂಬ್ಲಿ ಕ್ಷೇತ್ರಗಳಲ್ಲಿನ ಸುಸ್ಥಿರ ಅಭಿವೃದ್ಧಿಗೆ ಸಣ್ಣ ನೀರಾವರಿ ರಂಗದಲ್ಲಿ ಹೊಸ ಯೋಜನೆ ರೂಪಿಸಿ ಜಲ ಸಮೃದ್ದಿಯ ಭದ್ರ ಅಡಿಪಾಯ ಹಾಕಲು ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಧೃಢ ಸಂಕಲ್ಪ ಮಾಡಿದ್ದಾರೆ.
ತಮ್ಮ ಈ ವಿನೂತನ ಸಂಕಲ್ಪಕ್ಕೆ ಪೂರಕವಾಗಿ ಸಚಿವ ಡಾ. ಅಜಯ್ ಸಿಂಗ್ ಅವರು ಸೋಮವಾರ ಬೆಂಗಳೂರಿನ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಲಬುರಗಿ ವಿಭಾಗದ ವಿವಿಧ ನೀರಾವರಿ ಯೋಜನೆಗಳ ಕುರಿತಂತೆ ಮಹತ್ವದ ಸಭೆ ನಡೆಸಿದ್ದಾರೆ.
ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಸೇರಿದಂತೆ ಕಲ್ಯಾಣ ಪ್ರದೇಶದ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿರುವ ಸಣ್ಣ ನಿರಾವರಿ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ಕೊಡುವ ಸಂಕಲ್ಪದೊಂದಿಗೆಪ್ರಗತಿ ಪರಿಶೀಲನೆ ನಡೆಸಿ ಗಮನ ಸೆಳೆದಿದ್ದಾರೆ.ಸಭೆಯಲ್ಲಿ ಸಚಿವರು ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಈ ಭಾಗದ ಇಂಜಿನಿಯರ್‍ಗಳು, ಅಧಿಕಾರಿಗಳು, ತಾಂತ್ರಿಕ ಪರಿಣಿತರಿಗೆ ಸೂಚನೆಗಳನ್ನು ರವಾನಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರತಿಯೊಂದು ಪ್ರದೇಶಕ್ಕೂ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ದೂರದೃಷ್ಟಿಯೊಂದಿಗೆ, ಪ್ರಗತಿಯಲ್ಲಿರುವ ಯೋಜನೆಗಳ ಅನುಷ್ಠಾನ, ಸ್ಥಗಿತಗೊಂಡ ಕಾಮಗಾರಿಗಳ ಪುನಶ್ಚೇತನ ಹಾಗೂ ಹೊಸ ನೀರಾವರಿ ಯೋಜನೆಗಳ ರೂಪುರೇಷೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಎಂದು ಬೆಂಗಳೂರಿನ ಸಭೆಯಲ್ಲಿನ ಮಹತ್ವದ ಚರ್ಚೆಗಳ ಕುರಿತಂತೆ ಸಚಿವ ಡಾ. ಅಜಯ್ ಸಿಂಗ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿರುವ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸುವುದು, ಜಲಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಲಸಮೃದ್ಧಿ ಅಡಿಪಾಯ ಹಾಕಿ ರೈತರ ಬದುಕಿನಲ್ಲಿ ಸಮೃದ್ಧಿ ತರುವ ಸುಸ್ಥಿರ ನೀರಾವರಿ ವ್ಯವಸ್ಥೆಯ ನಿರ್ಮಾಣ ಮಾಡುವ ಗುರಿ ತಮ್ಮದಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಇದಲ್ಲದೆ ಜಿಲ್ಲೆಗೊಂದು ವಿಶೇಷ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವುದು, ಇಡೀ ಪ್ರದೇಶದ ಅಸಂಬ್ಲಿ ಕ್ಷೇತ್ರವಾರು ಶಾಸಕರ ಅಭಿಪ್ರಾಯದಂತೆ ಹೊಸ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೆಕೆಆರ್‍ಡಿಬಿ ಸಹಯೊಗದೊಂದಿಗೆ ಅದಾಗಲೇ ಕಲೆದ ಬಾರಿ 200 ಕೋಟಿ ರು ವೆಚ್ಚದಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಯೋಜನೆ ರೂಪಿಲಾಗಿತ್ತು. ಈ ಬಾರಿ ಇದೇ ಸಹಕಾರದಲ್ಲಿ 300 ಕೋಟಿ ರು ಮೊತ್ತದ ಯೋಜನೆ ರೂಪಿಸುವ ಚಿಂನೆ ಇರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಿ ಇಂಜಿನಿಯರ್‍ಗಳಿಗೆ ತಾಂತ್ರಿಕ ವರದಿ ಸಿದ್ಧಪಡಿಸಲು ಸೂಚಿಸಿದ್ದಾಗಿ ಸಚಿವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಾಮಗಾರಿಗಳಲ್ಲಿ ಗುಣಮಟ್ಟ, ವೇಗ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಪ್ರತಿಯೊಂದು ಯೋಜನೆಯ ಪ್ರಯೋಜನ ನೇರವಾಗಿ ರೈತರ ಹೊಲಗಳಿಗೆ ತಲುಪುವಂತೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ತಾವು ಜಿಲ್ಲೆಯ ಪ್ರತಿಯೊಬ್ಬರಿಂದಲೂ ಇಲಾಖೆಯ ಮಾಹಿತಿ ಪಡೆದಿರುವ ತಾವು ಬರುವ ದಿನಗಳಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ ಹೊಸ ವೇಗದೊಂದಿಗೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ.ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಇಲಾಖೆಯ ಮುಖ್ಯ ಇಂಜಿನಿಯರ್, ಉನ್ನತ ಅಧಿಕಾರಿಗಳು, ಕಲ್ಯಾಣ ನಾಡಿನ ಕಲಬುರಗಿ ಸೇರಿದಂತೆ 7 ಜಿಲ್ಲೆಗಳ ಸಣ್ಣ ನೀರಾವರಿ ಇಲಾಖೆ ಹಿರಿಯ ಇಂಜಿನಿಯರ್‍ಗಳು ಪಾಲ್ಗೊಂಡಿದ್ದರು.