Home ಜಿಲ್ಲೆ ಮೈಸೂರು ಮೈಸೂರಿನಲ್ಲೂ ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ

ಮೈಸೂರಿನಲ್ಲೂ ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ

ಮೈಸೂರು, ನ.4:- ಪ್ರತಿ ಟನ್ ಕಬ್ಬಿಗೆ 4500 ರೂ ಹಾಗೂ ರಾಜ್ಯ ಸರ್ಕಾರ 1 ಸಾವಿರ ರೂ ಎಫ್‍ಆರ್‍ಪಿ ದರ ನಿಗದಿಪಡಿಸುವಂತೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮೈಸೂರಿನಲ್ಲೂ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ಹಳೆಯ ಡೇರಿ ಎದುರಿನ ಬುದ್ಧ ಸರ್ಕಲ್‍ನಿಂದ ಹೊರಟ ರೈತರು, ಕಬ್ಬು ಬೆಳೆಗಾರರು ರೈತ ವಿರೋಧಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್‍ಜೋಶಿ ಅವರ ಫೆÇೀಟೋಗಳಿಗೆ ಮೂರು ನಾಮ ಬಳಿದು ಗೋವಿಂದ ಗೋವಿಂದ ಸಿಎಂ ಗೋವಿಂದ, ಗೋವಿಂದ ಗೋವಿಂದ ಪ್ರಹ್ಲಾದ್ ಜೋಶಿ ಗೋವಿಂದ ಎನ್ನುವ ಘೋಷಣೆಗಳನ್ನು ಮೊಳಗಿಸಿ ಗಮನ ಸೆಳೆದರು. ಕಬ್ಬು ಹೊತ್ತಿದ್ದ ರೈತರು ಅಲ್ಲಲ್ಲಿ ಉರುಳುಸೇವೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಮುಖ್ಯ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ಪ್ರವೇಶಕ್ಕೆ ಮುಂದಾದ ರೈತರನ್ನು ಪೆÇಲೀಸರು ತಡೆದರು. ಈ ವೇಳೆ ನೂಕಾಟ, ತಳ್ಳಾಟವಾಯಿತು. ಗೇಟ್ ಬಳಿ ರೈತರನ್ನು ತಡೆಯಲು ಹಾಕಿದ್ದ ಬ್ಯಾರಿಕೇಡ್‍ಗಳನ್ನು ತಳ್ಳಿದ ರೈತರು ಡಿವೈಡರ್ ಬಳಿಗೆ ಎಸೆದರು. ಪೆÇಲೀಸರನ್ನು ಬೇಧಿಸಿ ಒಳನುಗ್ಗಲು ರೈತರು ಯತ್ನಿಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಪೆÇಲೀಸರು ಸುತ್ತುವರಿದು ಪ್ರತಿಭಟನಾಕಾರರನ್ನು ತಡೆಯುವಲ್ಲಿ ಸಫಲವಾದರು. ಇದರಿಂದಾಗಿ ರೈತರು ಮತ್ತಷ್ಟು ಆಕ್ರೋಶಗೊಂಡು ಮಹದೇಶ್ವರ ರಸ್ತೆಯಲ್ಲಿ ರಸ್ತೆತಡೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡಿದರು. ಬನ್ನೂರು, ತಿ.ನರಸೀಪುರ ಮಾರ್ಗದಿಂದ ಬರುವ ಬಸ್‍ಗಳು, ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸಲಾಯಿತು. ರಸ್ತೆತಡೆ ಕೈಬಿಡುವಂತೆ ಡಿಸಿಪಿಗಳಾದ ಡಾ.ಹರ್ಷ ಪ್ರಿಯಂವದಾ, ಕೆ.ಎಸ್.ಸುಂದರರಾಜ್ ನಡೆಸಿದ ಮಾತುಕತೆ ವಿಫಲವಾಯಿತು.
ಪೆÇಲೀಸರು ಡಿಸಿ ಕಚೇರಿ ಆವರಣಕ್ಕೆ ನಮ್ಮನ್ನು ಬಿಡಬೇಕು. ಇಲ್ಲದಿದ್ದರೆ ರಸ್ತೆಯಲ್ಲೇ ಅಡುಗೆ ಮಾಡುತ್ತೇವೆಂದು ಹೇಳಿ ರಸ್ತೆಯಲ್ಲಿ ಗ್ಯಾಸ್ ಸ್ಟೌವ್ ಹಚ್ಚಿ ಬಾತ್ ತಯಾರಿಸಿದರು. ರೈತರುಗಳೇ ತರಕಾರಿ ಹಚ್ಚಿಕೊಂಡು ಘೊಷಣೆಗಳನ್ನು ಕೂಗುತ್ತಲೇ ಬಾತ್ ತಯಾರಿಸಿ ಸರ್ಕಾರಕ್ಕೆ ಬಿಸಿಮುಟ್ಟಿಸಿದರು.


ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರಗಳು ರೈತರಿಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ನೌಕರರ ವೇತನ ಹೆಚ್ಚು ಮಾಡಬೇಕೆಂದು ಮಾಡಿದ ಮನವಿಗೆ ಶೇ.3ರಷ್ಟು ಮಾಡಿದರೆ, ಕಬ್ಬು ದರವನ್ನು 50 ರೂಪಾಯಿ ಹೆಚ್ಚು ಮಾಡಲು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಒಂದು ಸಾವಿರ ಎಸ್‍ಎಪಿ ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ರಾಜ್ಯ ಸರ್ಕಾರ ಹೇಳುತ್ತಿರುವುದು ಖಂಡನೀಯ. ಕೇಂದ್ರ ನಾಟಕೀಯ ಸಭೆ ಮಾಡಿ ಮೊಸಳೆ ಕಣ್ಣೀರು ಸುರಿಸುವ ಬದಲಿಗೆ ರೈತರ ಶ್ರಮಕ್ಕೆ ತಕ್ಕಂತೆ ಬೆಲೆ ಕೊಡಬೇಕು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಬೆಲೆ, ತೂಕ ಕಡಿಮೆ ಮಾಡಿ ದೊಡ್ಡ ವಂಚನೆ ಮಾಡಲಾಗಿದೆ ಎಂದರು.


ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಅತ್ತಹಳ್ಳಿ ದೇವರಾಜ್, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮಂಜುಕಿರಣ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.