Home ಮುಖಪುಟ ಸುದ್ದಿ ರಾಜ್ಯದಲ್ಲಿ ಪೋಸ್ಟರ್ ವಾರ್

ರಾಜ್ಯದಲ್ಲಿ ಪೋಸ್ಟರ್ ವಾರ್

ಬೆಂಗಳೂರು, ನ.೩- ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ‘ನನ್ನ ಮಕ್ಕಳು’ ಎಂಬ ಪದಪ್ರಯೋಗ ಬಳಸಿ ತೀವ್ರ ಟೀಕೆಗೆ ಒಳಗಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊನೆಗೂ ಕ್ಷಮೆಯಾಚಿಸುವ ಮೂಲಕ ಈ ವಿಚಾರಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಸದ್ಯ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ‘ನನ್ನ ಮಕ್ಕಳು’ ಎಂಬ ಪದಪ್ರಯೋಗ ಮಾಡಿದ್ದ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದ ಕಾಂಪೌಂಡ್ ಗೋಡೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವ್ಯಂಗ್ಯಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದ್ದರು. ರಾಜಕೀಯ ನಾಯಕರ ಹೇಳಿಕೆಗಳಿಗೆ ಬೀದಿಗಳಲ್ಲಿ ಪೋಸ್ಟರ್‌ಗಳ ಮೂಲಕ ತಿರುಗೇಟು ನೀಡುವ ಕಾಂಗ್ರೆಸ್-ಬಿಜೆಪಿ ನಡುವಿನ ಹಳೆಯ ಸಮರ ಮತ್ತೆ ಮುನ್ನೆಲೆಗೆ ಬಂದಿತ್ತು.

ಆದರೆ ತೀವ್ರ ಟೀಕೆ ಮತ್ತು ಪ್ರತಿಭಟನೆಗಳ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. “ನನ್ನ ಮಾತಿನಿಂದ ಕಾಂಗ್ರೆಸ್‌ನವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ ಹಾಗೂ ಕೆಪಿಎಸ್‌ಸಿ ವಿಚಾರವಾಗಿ ಮಾತನಾಡುವಾಗ ಸಿಟ್ಟಿನ ಭರದಲ್ಲಿ ಆ ಪದವನ್ನು ಬಳಸಿದ್ದಾಗಿ ಅವರು ತಿಳಿಸಿದ್ದಾರೆ. ತಮ್ಮ ಹೇಳಿಕೆ ಉದ್ದೇಶಪೂರ್ವಕವಾಗಿರಲಿಲ್ಲ ಎಂಬ ಸಮರ್ಥನೆಯೊಂದಿಗೆ ಕ್ಷಮೆಯಾಚಿಸಿರುವ ವಿಜಯೇಂದ್ರ, ವಿವಾದಕ್ಕೆ ತಣ್ಣೀರು ಎರಚುವ ಪ್ರಯತ್ನ ಮಾಡಿದ್ದಾರೆ.

ದಾವಣಗೆರೆಯಲ್ಲಿ ಇತ್ತೀಚೆಗೆ ಮೀಸಲಾತಿ ಹಾಗೂ ಸರ್ಕಾರಿ ಹುದ್ದೆಗಳ ಭರ್ತಿ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದರು.ಈ ವೇಳೆ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲ ಎಂಬ ಏಕವಚನದ ಪದಪ್ರಯೋಗ ಮಾಡಿದ್ದರು. ರಾಜಕೀಯವಾಗಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ವಿಜಯೇಂದ್ರ ಬಳಸಿದ ಈ ಪದಗಳು ಇದೀಗ ವಿವಾದದ ಕೇಂದ್ರಬಿಂದುವಾಗಿವೆ.

ವಿಜಯೇಂದ್ರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಅವಹೇಳನಕಾರಿ ಎಂದು ಪರಿಗಣಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಭಾಷೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಭಾಷೆಗೆ ಜವಾಬ್ದಾರಿ ಇರಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ವಿರುದ್ಧ ಟೀಕೆ ಮಾಡುವ ಹಕ್ಕು ಪ್ರತಿಪಕ್ಷಕ್ಕಿದ್ದರೂ, ವೈಯಕ್ತಿಕ ನಿಂದನೆ ಅಥವಾ ಅಸಮಂಜಸ ಪದಪ್ರಯೋಗ ರಾಜಕೀಯ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂಬ ವಾದವನ್ನು ಕಾಂಗ್ರೆಸ್ ನಾಯಕರು ಮುಂದಿಟ್ಟಿದ್ದರು

ವಿಜಯೇಂದ್ರ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ರಾಜಾಜಿನಗರ, ಮಂಜುನಾಥನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸದ ಕಾಂಪೌಂಡ್ ಗೋಡೆ ಹಾಗೂ ವಿಜಯೇಂದ್ರ ನಿವಾಸದ ಸುತ್ತಮುತ್ತಲೂ ವ್ಯಂಗ್ಯಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿತ್ತು.

ಪೋಸ್ಟರ್‌ಗಳಲ್ಲಿ ವಿಜಯೇಂದ್ರ ಹೇಳಿಕೆಯನ್ನು ಟೀಕಿಸುವ ಬರಹಗಳಿದ್ದು, ಕಾಂಗ್ರೆಸ್ ನಾಯಕರನ್ನು ಅವಹೇಳನ ಮಾಡಿದ ಪದಪ್ರಯೋಗಕ್ಕೆ ಕ್ಷಮೆಯಾಚಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.ಜೊತೆಗೆ ಈ ಪೋಸ್ಟರ್‌ಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ವಿಜಯೇಂದ್ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರನ್ನು ಉದ್ದೇಶಿಸಿ ‘ನನ್ನ ಮಕ್ಕಳು’ ಎಂಬ ಪದಪ್ರಯೋಗ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷರು ಕ್ಷಮೆಯಾಚಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.
ಇದೆಲ್ಲದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ

ಆದರೆ, ವಿಜಯೇಂದ್ರ ಅವರ ಕ್ಷಮೆಯಾಚನೆಯಿಂದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸಂಪೂರ್ಣವಾಗಿ ತಣ್ಣಗಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದುರಾಗಿದೆ.ಕಪ್ಪುಪಟ್ಟಿ ಪ್ರದರ್ಶನದ ಎಚ್ಚರಿಕೆ ಹಾಗೂ ಪೋಸ್ಟರ್ ಅಭಿಯಾನದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆಯಿದೆ.

ಒಟ್ಟಾರೆ, ದಾವಣಗೆರೆಯಲ್ಲಿ ಮೀಸಲಾತಿ ಮತ್ತು ಸರ್ಕಾರಿ ಹುದ್ದೆಗಳ ಭರ್ತಿ ವಿಚಾರವಾಗಿ ಆರಂಭವಾದ ರಾಜಕೀಯ ವಾಕ್ಸಮರ ಇದೀಗ ಬೆಂಗಳೂರಿನಲ್ಲಿ ಪೋಸ್ಟರ್ ಸಮರವಾಗಿ ರೂಪಾಂತರಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪಗಳ ನಡುವೆ ರಾಜಕೀಯ ನಾಯಕರ ಸಾರ್ವಜನಿಕ ಭಾಷೆಯ ಕುರಿತ ಚರ್ಚೆಯೂ ಮುನ್ನೆಲೆಗೆ ಬಂದಿದೆ. ವಿಜಯೇಂದ್ರ ಅವರ ಕ್ಷಮೆಯಾಚನೆಯ ಬಳಿಕವೂ ಪೋಸ್ಟರ್ ಅಭಿಯಾನ ಮುಂದುವರಿಯುತ್ತದೆಯೇ ಅಥವಾ ವಿವಾದಕ್ಕೆ ತೆರೆ ಬೀಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.