Home ಮುಖಪುಟ ಸುದ್ದಿ ಸ್ಟಿಂಗ್ ಆಪರೇಷನ್ ರಾಜ್ಯಕ್ಕೆ ದೊಡ್ಡ ಕಳಂಕ: ಕೆ.ಎನ್. ರಾಜಣ್ಣ

ಸ್ಟಿಂಗ್ ಆಪರೇಷನ್ ರಾಜ್ಯಕ್ಕೆ ದೊಡ್ಡ ಕಳಂಕ: ಕೆ.ಎನ್. ರಾಜಣ್ಣ

ಬೆಂಗಳೂರು.ನ೩: ಸ್ಟಿಂಗ್ ಆಪರೇಷನ್ ಪ್ರಕರಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದು, ಈ ಪ್ರಕರಣದ ಕುರಿತು ಉನ್ನತ ಮಟ್ಟದ ಅಥವಾ ಯಾವುದೇ ಹಂತದ ತನಿಖೆ ನಡೆದರೂ ಸತ್ಯ ಹೊರಬರಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಸ್ಟಿಂಗ್ ಆಪರೇಷನ್‌ನಿಂದ ಪಕ್ಷದ ಮೇಲೆ ಉಂಟಾಗುತ್ತಿರುವ ಪರಿಣಾಮ, ವೈಯಕ್ತಿಕ ಚಾರಿತ್ರ್ಯದ ಮೇಲೆ ಆಗುತ್ತಿರುವ ಪ್ರಭಾವ ಸೇರಿದಂತೆ ಎಲ್ಲ ವಿಚಾರಗಳನ್ನು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ ಎಂದರು.

ಸ್ಟಿಂಗ್ ಆಪರೇಷನ್ ಪ್ರಕರಣ ಕರ್ನಾಟಕಕ್ಕೆ ಅಪಕೀರ್ತಿ ತರುವಂತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಅಭಿವೃದ್ಧಿಗೆ ಗುಜರಾತ್ ಮಾದರಿ ಎಂಬಂತೆ, ಇಂತಹ ಪ್ರಕರಣಗಳಿಗೆ ಕರ್ನಾಟಕ ಮಾದರಿ ಎಂಬ ಅಪಖ್ಯಾತಿ ಬರಬಾರದು. ಈ ವಿಚಾರದಲ್ಲಿ ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ವಿಷಾದಿಸಿದರು.

ಯಾವುದೇ ತನಿಖೆ ನಡೆದರೂ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ಅವರಿಗೆ ನ್ಯಾಯ ದೊರೆಯಬೇಕು. ಸ್ಟಿಂಗ್ ಆಪರೇಷನ್‌ಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳಿಗೆ ಯಾರೂ ಮುಂದಾಗದಂತೆ ಸೂಕ್ತ ತನಿಖೆ ನಡೆಸುವುದು ಅಗತ್ಯ ಎಂದು ಹೇಳಿದರು.

೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದ ಕುರಿತು ಜನರಲ್ಲಿ ಗೊಂದಲವಿದೆ. ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ, ಪ್ರಚಾರಕ್ಕೂ ಹೋಗುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪರಿಷತ್ ಚುನಾವಣೆ ಮೇಲೂ ಇದರ ಪರಿಣಾಮ ಬೀರಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯ ನಾಯಕತ್ವದ ಕುರಿತು ಸ್ಪಷ್ಟತೆ ನೀಡಬೇಕು. ಜನರಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವುದು ಅಗತ್ಯ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ಕುರಿತು ತಾವು ಕೂಡ ಮಾಧ್ಯಮಗಳಲ್ಲಿ ನೋಡಿದ್ದೇನೆ. ದೆಹಲಿಗೆ ತೆರಳುವ ಮೊದಲು ಅವರೊಂದಿಗೆ ಮಾತನಾಡಿದ್ದೆ. ಭೇಟಿಯಿಂದ ಹಿಂದಿರುಗಿದ ಬಳಿಕ ಮಾತುಕತೆ ನಡೆಸಿಲ್ಲ ಎಂದು ರಾಜಣ್ಣ ಸ್ಪಷ್ಟಪಡಿಸಿದರು.