
ತುಮಕೂರು, ನ. ೩- ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿ ರಸ್ತೆ ಮುಚ್ಚುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಬೇಕು ಎಂದು ವಾರ್ಡ್-೧ರ ವ್ಯಾಪ್ತಿಯ ಮರಳೇನಹಳ್ಳಿ, ಮರಳೇನಹಳ್ಳಿ ಗೋಮಾಳ, ಮರಿಯಪ್ಪನಪಾಳ್ಯ ಹಾಗೂ ಊರುಕೆರೆ ಮಜರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದಿಂದ ಗೋಮಾಳಕ್ಕೆ ಹೋಗುವ ರಸ್ತೆ ಸರ್ವೆ ನಂ. ೬೨/೨ ರಲ್ಲಿ ೧.೧೬ ಗುಂಟೆ ಇದ್ದು, ೫-೦೮ ಗುಂಟೆ ಜಮೀನಿನಲ್ಲಿ ಗೋಮಾಳಕ್ಕೆ ಹೋಗುವ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಸುಮಾರು ೭೦-೮೦ ವರ್ಷಗಳಿಂದಲೂ ಸಾರ್ವಜನಿಕರು, ಮರಳೇನಹಳ್ಳಿ ಹಾಗೂ ಮರಳೇನಹಳ್ಳಿ ಗೋಮಾಳದಲ್ಲಿ ವಾಸವಾಗಿರುವ ಗ್ರಾಮಸ್ಥರು, ಊರುಕೆರೆ ಮಜರೆ, ಮರಿಯಪ್ಪನಪಾಳ್ಯದ ಗ್ರಾಮಸ್ಥರು ಪ್ರತಿನಿತ್ಯ ಓಡಾಡತ್ತಿದ್ದರು. ಈಗಲೂ ಸಹ ಇದೇ ರಸ್ತೆ ಈ ಭಾಗದ ಜನತೆಗೆ ಅನಿವಾರ್ಯವಾಗಿದೆ. ಬೇರೆ ಯಾವುದೇ ರಸ್ತೆ ಸಂಪರ್ಕ ಗೋಮಾಳಕ್ಕಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಸ.ನಂ. ೬೨/೨ರ ಜಮೀನಿನ ಮಾಲೀಕರಾದ ಚಂದ್ರಯ್ಯ ಮತ್ತು ಅವರ ಪುತ್ರ ನವೀನ್ ಎಂಬುವರು ಕಳೆದ ಮೂರು ತಿಂಗಳ ಹಿಂದೆ ಈ ಜಮೀನನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಬೇಲಿ ಹಾಕಿದ್ದಾರೆ ಎಂದು ದೂರಿದ್ದಾರೆ.
೨೦೧೫-೧೬ರಲ್ಲಿ ಮರಳೇನಹಳ್ಳಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಕಂದಾಯ ಇಲಾಖೆಯಿಂದ ನಿವೇಶನಗಳ ಹಕ್ಕಪತ್ರು ನೀಡಲಾಗಿದೆ. ಆ ಮನೆಗಳಿಗೂ ಸಹ ಯಾವುದೇ ರಸ್ತೆ ಸಂಪರ್ಕ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಸಹ ಜಮೀನಿನ ಮಾಲೀಕರು ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಿ ರಸ್ತೆಗೆ ಅಡ್ಡಲಾಗಿ ಹಾಕಲಾಗಿರುವ ಕಾಂಪೌಂಡ್ನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಇದೇ ರಸ್ತೆ ಮಾರ್ಗವಾಗಿ ಸರ್ಕಾರದಿಂದ ವಿದ್ಯುತ್ ಸಂಪರ್ಕ ಅಳವಡಿಸಲಾಗಿದೆ. ಜತೆಗೆ ಹೇಮಾವತಿ ಕುಡಿಯುವ ನೀರಿನ ಸಂಪರ್ಕವೂ ಇದೇ ರಸ್ತೆ ಮಾರ್ಗವಾಗಿ ಹಾದು ಹೋಗಿದೆ. ಶಾಲೆಗಳಿಗೆ ಹೋಗಲು ಮಕ್ಕಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಅವಲಂಬಿಸಬೇಕಿದೆ. ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಈ ರಸ್ತೆಗೆ ತಂತಿ ಬೇಲಿ ಹಾಕಿರುವುದರಿಂದ ಗೋಮಾಳದಲ್ಲಿರುವ ಸುಮಾರು ೮೦ ಮನೆಗಳಿಗೆ ಹಾಗೂ ಜಮೀನಿಗೆ ಹೋಗಲು ಬೇರೆ ಯಾವುದೇ ರಸ್ತೆ ಇಲ್ಲದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.


























