
ತುಮಕೂರು, ನ. ೩- ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗುರು-ಶಿಷ್ಯನಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಅಪರೂಪದ ಪ್ರಸಂಗ ಜರುಗಿತು.
ಹಿರಿಯ ಛಾಯಾಗ್ರಾಹಕರು, ವ್ಯಂಗ್ಯಚಿತ್ರಕಾರರು, ಚುಕ್ಕಿ ಕಲಾವಿದ, ರಂಗಭೂಮಿ ಹಾಗೂ ಚಲನಚಿತ್ರ ನಟರಾದ ಆರ್. ಸುರೇಂದ್ರ ಹಾಗೂ ಇವರ ಶಿಷ್ಯರಾದ ದಾದಾಪೀರ್ ಎನ್. ರವರಿಗೆ ೨೦೨೬ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಒಂದೇ ವೇದಿಕೆಯಲ್ಲಿ ಗುರು-ಶಿಷ್ಯರು ಪ್ರಶಸ್ತಿ ಸ್ವೀಕರಿಸುವ ಮೂಲಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಆರ್. ಸುರೇಂದ್ರ ಅವರು ೧೯೬೦ ರಿಂದ ೭೦ರ ವರೆಗೆ ನಾಟಕಗಳಲ್ಲಿ ಬಾಲನಟರಾಗಿ ಅಭಿನಯಿಸಿದ್ದರು. ಕತ್ತಲೆದಾರಿ ದೂರ, ಮಾರೀಚನ ಬಂಧುಗಳು, ಮೆರವಣಿಗೆ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬೆಲ್ಚಿ, ಬೆಳೆದವರು, ಗದ್ದುಗೆ ಪುರಾಣ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.
ಡಾ. ಚಂದ್ರಶೇಖರ್ ಕಂಬಾರ ರವರ ನಿರ್ದೇಶನದ ಕಾಡು ಕುದುರೆ ನಾಟಕದಲ್ಲೂ ಅಭಿನಯಿಸಿದ್ದಾರೆ. ಠಕ್ಕಾ ಬಿಟ್ಟರೆ ಸಿಕ್ಕಾ.., ಹೊಸ ಮೇಡಂ, ನವಭಾರತ ಚಲನಚಿತ್ರದಲ್ಲೂ ಸಹ ಸುರೇಂದ್ರರವರು ಅಭಿನಂಯಿಸಿದ್ದಾರೆ.
೧೯೮೭ರ ನಂತರ ಸ್ಟುಡಿಯೋ ಆರಂಭಿಸಿದ್ದ ಆರ್. ಸುರೇಂದ್ರರವರು ನಗೆಮುಗಳು, ಹಾಸ್ಯಲೋಕ, ಏಕೇಶ್ ಪತ್ರಿಕೆ, ಸೊಗಡು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಆ ಸುರೇಂದ್ರ ರವರ ಸ್ಟುಡಿಯೋದಲ್ಲಿ ಶಿಷ್ಯರಾಗಿ ಕೆಲಸಕ್ಕೆ ಸೇರಿಕೊಂಡ ದಾದಾಪೀರ್ ಎನ್. ಅವರು ಫೊಟೋಗ್ರಫಿ ಕೆಲಸವನ್ನು ಚೆನ್ನಾಗಿ ಕಲಿತು, ಅವರ ಮಾರ್ಗದರ್ಶನದಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರ್. ಸುರೇಂದ್ರ ಹಾಗೂ ದಾದಾಪೀರ್ ಎನ್. ರವರಿಗೆ ಇವರಿಬ್ಬರ ಶಿಷ್ಯರಾದ ನಿಸರ್ಗ ಶೇಖರ್, ಪೂಜಾ ನಾಗರಾಜ್, ಪ್ರೀಮಿಯರ್ ಪ್ರಕಾಶ್, ತುಮಕೂರು ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ಹಾಗೂ ಗುತ್ತಿಗೆದಾರ ಗೋಪಿನಾಥ್ ಅಭಿನಂದಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಗುರು-ಶಿಷ್ಯರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತುಮಕೂರು ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.


























