
ಬೆಂಗಳೂರು,ನ.೨- ಖಾಸಗಿ ಜಮೀನಿನಲ್ಲಿ ಲೇಔಟ್ ರಸ್ತೆ ನಿರ್ಮಿಸುವ ವಿಚಾರವಾಗಿ ಉಂಟಾದ ವಿವಾದ ಹಲ್ಲೆಗೆ ತಿರುಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಾಡಸೊಣ್ಣಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಗರಗಿರಿ ಟೌನ್ಶಿಪ್ಗೆ ರಸ್ತೆ ನಿರ್ಮಿಸುವ ಉದ್ದೇಶದಿಂದ ಜೆಸಿಬಿ ಮೂಲಕ ಯಾವುದೇ ಮುನ್ಸೂಚನೆ ನೀಡದೆ, ಸಂಬಂಧಪಟ್ಟ ಅಧಿಕಾರಿಗಳನ್ನೂ ಕರೆತರದೆ ಕೆಲವರು ಏಕಾಏಕಿ ಜಮೀನಿಗೆ ಆಗಮಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಈ ವೇಳೆ ಇದನೆಲ್ಲಾ ಪ್ರಶ್ನಿಸಿದ ಜಮೀನು ಮಾಲೀಕ ಮಾರುತಿ ಹಾಗೂ ಅವರ ಕುಟುಂಬಸ್ಥರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಮಹಿಳೆಯರು, ವೃದ್ಧರು ಹಾಗೂ ಪುರುಷರ ಮೇಲೂ ಹಲ್ಲೆ ನಡೆಸಲಾಗಿದ್ದು, ಘಟನೆಯ ದೃಶ್ಯಗಳು ಮೊಬೈಲ್ ಫೋನ್ನಲ್ಲಿ ಸೆರೆಯಾಗಿವೆ. ಹಲ್ಲೆಯಿಂದ ಮಾರುತಿ ಕುಟುಂಬದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುವ ಮೊದಲು ಯಾವುದೇ ನೋಟಿಸ್ ನೀಡಿಲ್ಲ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿಯೂ ಪ್ರಕ್ರಿಯೆ ನಡೆಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮಾರುತಿ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


























