
ಕೊರಟಗೆರೆ, ನ. ೨- ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಮಾಜಿಕ ಸೇವೆ, ಶಿಸ್ತು, ಸಹಬಾಳ್ವೆ ಮತ್ತು ಸ್ವಾವಲಂಬನೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವುದರೊಂದಿಗೆ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಮಹತ್ವದ ವೇದಿಕೆಯಾಗಿದೆ ಎಂದು ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ೨೦೨೬ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳ ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶಿಕ್ಷಣದ ಮಹತ್ವ ಹಾಗೂ ಸಾಮಾಜಿಕ ಸಾಮರಸ್ಯದಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ನಾಯಕತ್ವದ ಗುಣ, ಸಮಯಪ್ರಜ್ಞೆ, ಪರಸ್ಪರ ಸಹಕಾರ ಹಾಗೂ ಶ್ರಮದ ಗೌರವವನ್ನು ಬೆಳೆಸುತ್ತವೆ. ಸಮಾಜದಿಂದ ಅನೇಕ ಸೌಲಭ್ಯಗಳನ್ನು ಪಡೆಯುವ ನಾವು, ಸಮಾಜದ ಒಳಿತಿಗಾಗಿ ನಮ್ಮಿಂದ ಸಾಧ್ಯವಾದ ಸೇವೆಯನ್ನು ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸೇವೆ ಮಾಡುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುವುದರ ಜತೆಗೆ ಸಮಾಜದಲ್ಲಿಯೂ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣ ಜನರೊಂದಿಗೆ ಬೆರೆಯುವ ಮೂಲಕ ಅವರ ಬದುಕಿನ ಸವಾಲುಗಳನ್ನು ಅರಿತುಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಸ್ವಚ್ಛತೆ, ಪರಿಸರ ಕಾಳಜಿ, ಸಾಮಾಜಿಕ ಜಾಗೃತಿ ಹಾಗೂ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಗಳಿಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಕ ರೆ ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆರ್ ನಾಗರಾಜು ಮಾತನಾಡಿ, ಯುವ ಜನರು ದೇಶದ ಅಮೂಲ್ಯ ಸಂಪತ್ತು. ಅವರಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮ ಬೆಳೆದಾಗ ದೇಶದ ಪ್ರಗತಿ ಮತ್ತಷ್ಟು ವೇಗ ಪಡೆಯುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ನಡವಳಿಕೆ, ಮಾನವೀಯ ಮೌಲ್ಯಗಳು ಹಾಗೂ ಸಮಾಜದ ಬಗ್ಗೆ ಕಾಳಜಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರದಲ್ಲಿ ಕಲಿಯುವ ಅನುಭವಗಳನ್ನು ತಮ್ಮ ದೈನಂದಿನ ಬದುಕಿನಲ್ಲಿಯೂ ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಮಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ರುದ್ರೇಶ್, ಶಿಬಿರಾಧಿಕಾರಿ ನಂಜುಂಡಪ್ಪ ಬಿ, ಸಹ ಶಿಬಿರಾಧಿಕಾರಿ ಸುಗ್ಗಯ್ಯ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಎಲೆರಾಂಪುರ ಗ್ರಾ.ಪಂ ಆಢಳಿತಾಧಿಕಾರಿ ಮಹೇಶ್ವರಿ, ಶಿಬಿರದ ವಿಶೇಷ ಆಹ್ವಾನಿತರಾದ ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಧ ಮತ್ತಿತರರು ಭಾಗವಹಿಸಿದ್ದರು.


























